ಬೈ ಎಲೆಕ್ಷನ್ ಸೋತ್ರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತಾಕೋದು ನಿಶ್ಚಿತ : ಎಂ.ಬಿ‌.ಪಾಟೀಲ್ ಭವಿಷ್ಯ

ವಿಜಯಪುರ : ದಾವಣಗೆರೆ, ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಸೋತರೆ ಬಿ.ವೈ.ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕುವುದು ನಿಶ್ಚಿತ ಎಂದು ಸಚಿವ ಎಂ.ಬಿ.ಪಾಟೀಲ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ಫಲಿತಾಂಶ ವಿಜಯೇಂದ್ರರ ಅಳಿವು ಉಳಿವಿನ ಪ್ರಶ್ನೆ. ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ತೆಗೆಯಲು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಇದೊಂದು ಸುವರ್ಣ ಅವಕಾಶ. ಯತ್ನಾಳ್ ಇದನ್ನ ಬಳಸಿಕೊಳ್ಳಬೇಕು ಎಂದರು.

ಇದನ್ನೂ ಓದಿ : ಪ್ರದೀಪ್‌ ಈಶ್ವರ್‌ ಒಬ್ಬ ಜೋಕರ್, ಬೋಗಸ್‌ ಟ್ಯೂಷನ್‌ ನಡೆಸ್ತಾನೆ : ಯತ್ನಾಳ್

ಇನ್ನೂ ಯತ್ನಾಳ್ ಅವರಿಗೆ ವಿಜಯೇಂದ್ರ ಅವರನ್ನು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ತೆಗೆಯುವ ಉದ್ದೇಶವಿದಿಯೋ ಅಥವಾ ಅವರ ಕೈ ಬಲಪಡಿಸಬೇಕೆಂಬ ಉದ್ದೇಶವಿದೆಯೋ ಗೊತ್ತಿಲ್ಲ. ಉಪ ಚುನಾವಣೆಯಲ್ಲಿ ಒಂದು ವೇಳೆ ಯತ್ನಾಳ ಅವರು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದರೆ ಪರೋಕ್ಷವಾಗಿ ವಿಜಯೇಂದ್ರ ಕೈಬಲಪಡಿಸಿದಂತಾಗುತ್ತದೆ. ಬಿಜೆಪಿ ಗೆದ್ದರೆ ಅದರ ಕ್ರೆಡಿಟ್‌ ವಿಜಯೇಂದ್ರಗೆ ಹೋಗುತ್ತದೆ’ ಎಂದರು.

ಯತ್ನಾಳ್‌ಗೆ ಸ್ವಾಭಿಮಾನ, ಮಾನ ಮರ್ಯಾದೆ ಇದ್ದರೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗಬಾರದು. ಯತ್ನಾಳ ಅವರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ, ಬಿಜೆಪಿಗೆ ಮರಳಿ ಹೋಗಲು ದಾರಿ ಹುಡುಕುತ್ತಿದ್ದಾರೆ’ ಎಂದು ಹೇಳಿದರು.

ಯಡಿಯೂರಪ್ಪ, ವಿಜಯೇಂದ್ರ ಅವರನ್ನು ವಿರೋಧಿಸಿ ಯತ್ನಾಳ ತೋರಿಕೆಗಷ್ಟೇ ಮಾತನಾಡುತ್ತಾರೆ. ಒಳಗೊಳಗೆ ಯಡಿಯೂರಪ್ಪ ಕುಟುಂಬದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಯತ್ನಾಳ ಬಿಜೆಪಿ ಪರ ಪ್ರಚಾರ ಮಾಡಲಿ, ಬಿಡಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *