ಬೆಂಗಳೂರು : ಸದಾ ಒಂದಿಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ದಾವಣಗೆರೆಯಲ್ಲಿ ಚುನಾವಣೆ ಪ್ರಚಾರ ವೇಳೆ ಪ್ರದೀಪ್ ಈಶ್ವರ್ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು ನಮ್ಮ ಕಾಂಗ್ರೆಸ್ ಎಂದಿದ್ದರು.
ಆದರೆ, ಇದೀಗ ಪ್ರದೀಪ್ ಈಶ್ವರ್ಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಟಾಂಗ್ ಕೊಟ್ಟಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಒಬ್ಬ ಅನ್ಪಡ್. ಅಬ್ದುಲ್ ಕಲಾಂ ಅವರು ಭಾರತದ ರಾಷ್ಟ್ರಪತಿ ಆಗಿದ್ದು 25 ಜುಲೈ 2002 ರಂದು. ಆಗ ಭಾರತದ ಪ್ರಧಾನ ಮಂತ್ರಿ ಆಗಿದ್ದವರು ಶ್ರೀ ಅಟಲ್ ಬಿಹಾರಿ ವಾಜಪೇಯಿ. ಆಗ ಇದ್ದ ಸರ್ಕಾರ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಎಂದು ಸುರೇಶ್ ಕುಮಾರ್ ಟಾಂಗ್ ಕೊಟ್ಟಿದ್ದಾರೆ.
ದೇಶ ಕಂಡ ಅಪ್ರತಿಮ ಸಾಧಕ ಡಾ ಎಪಿಜೆ ಅಬ್ದುಲ್ ಕಲಾಂ 2002 ರಿಂದ 2007 ರವರೆಗೆ ಭಾರತದ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. 2002 ರಲ್ಲಿ ಅಧಿಕಾರದಲ್ಲಿದ್ದಿದ್ದು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ. ರಾಷ್ಟ್ರಪತಿ ಅಭ್ಯರ್ಥಿಯಾಗಿ ಅಂದು ಅಬ್ದುಲ್ ಕಲಾಂರನ್ನು ಮುನ್ನಲೆಗೆ ತಂದಿದ್ದು ಬಿಜೆಪಿ ನೇತೃತ್ವದ ಎನ್ ಡಿಎ. ಬಳಿಕ ಕಾಂಗ್ರೆಸ್ ನೇತೃತ್ವದ ಯುಪಿಎ ಕೂಡಾ ಅಬ್ದುಲ್ ಕಲಾಂರನ್ನು ಬೆಂಬಲಿಸಿತ್ತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ, ಅವಿರೋಧವಾಗಿ ಭಾರತದ ರಾಷ್ಟ್ರಪತಿಗಳಾಗಿ ಆಯ್ಕೆಯಾದರು ಅಬ್ದುಲ್ ಕಲಾಂ. ಜನರೂ ಅವರನ್ನು ಒಬ್ಬ ವ್ಯಕ್ತಿಯಾಗಿ, ವಿಜ್ಞಾನಿಯಾಗಿ ಮತ್ತು ರಾಷ್ಟ್ರಪತಿಯಾಗಿ ಆದರ್ಶ ವ್ಯಕ್ತಿಯಾಗಿ ಕಂಡಿದ್ದರು.
ಇದೀಗ ಪ್ರದೀಪ್ ಈಶ್ವರ್ ಮಾತಿನ ಯಡವಟ್ಟಿಗೆ ಸಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗ್ತಿದೆ. ಬಿಜೆಪಿ ನಾಯಕರು ಸಹ ಪ್ರದೀಪ್ ಈಶ್ವರ್ರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.