ಬಾಗಲಕೋಟೆ : ಸಿಎಂ ಸಿದ್ದರಾಮಯ್ಯನವರು ಯುಗಾದಿ ಮತ್ತು ದೀಪಾವಳಿ ಹಬ್ಬದ ದಿನಗಳಲ್ಲಿ ಮಾಂಸ ತಿನ್ನುತ್ತೇನೆ ಎಂದು ಹೇಳಿಕೆ ನೀಡುತ್ತಾರೆ. ಅಣ್ಣಾ, ನೀವು ಮಾಂಸವನ್ನಾದರೂ ತಿನ್ನಿ ಅಥವಾ ಏನನ್ನಾದರೂ ಮಾಡಿ, ಬೇಕಿದ್ದರೆ ಸುನ್ನತ್ ಮಾಡಿಸಿಕೊಳ್ಳಿ ನಾವು ಬೇಡ ಎನ್ನುವುದಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಪದಬಳಕೆ ಮಾಡಿದ್ದಾರೆ.
ಬಾಗಕೋಟೆ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಅವರು, ನೀವು ಏನಾದರೂ ಮಾಡಿಕೊಳ್ಳಿ ನಿಮ್ಮನ್ನ ಯಾರು ಕೂಡ ಕೇಳಲ್ಲ. ಆದರೆ ಹಿಂದೂಗಳ ಶ್ರದ್ಧೆಯ ಪ್ರತೀಕವಾಗಿರುವ ಹಬ್ಬಗಳ ದಿನವೇ ಮಾಂಸ ತಿನ್ನುತ್ತೇನೆ ಎಂದು ಹೇಳುವ ಮೂಲಕ ಕೋಟ್ಯಂತರ ಜನರ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದೀರಿ ಎಂದು ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಇನ್ನೂ ಕೇವಲ ಶೇ 15ರಷ್ಟು ಇರುವ ಮುಸ್ಲಿಮರನ್ನು ಓಲೈಸುವ ಸಲುವಾಗಿ ಮುಖ್ಯಮಂತ್ರಿಗಳು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಿಂದೂ ಸಮಾಜವನ್ನು ಬೇರೆ ಬೇರೆ ಪಂಗಡಗಳಾಗಿ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ.
ಕವರನಲ್ಲಿ ₹2000 ರೂಪಾಯಿ ಹಾಕಿಕೊಟ್ಟರೆ ಜನ ವೋಟ್ ಹಾಕುತ್ತಾರೆ ಎಂದು ಸಿದ್ದರಾಮಯ್ಯನವರು ಭಾವಿಸಿದ್ದಾರೆ, ಆದರೆ ಹಿಂದೂಗಳು ಈಗ ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ ಎಂದು ಪ್ರತಾಪ್ ಸಿಂಹ ಕರೆ ನೀಡಿದ್ರು.
ದೇಶದ ಅಭಿವೃದ್ಧಿ ಪಥದ ಬಗ್ಗೆ ಮಾತನಾಡಿದ ಅವರು, ಹಿಂದೂಗಳೆಲ್ಲರೂ ಒಗ್ಗಟ್ಟಾಗಿ ಮತ ಚಲಾಯಿಸಿದ್ದರಿಂದಲೇ ಇಂದು ನರೇಂದ್ರ ಮೋದಿಯವರಂತಹ ನಾಯಕರು ದೇಶದ ಪ್ರಧಾನಿಯಾಗಲು ಸಾಧ್ಯವಾಗಿದೆ. ದೇಶ ಇಂದು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿರುವುದಕ್ಕೆ ಹಿಂದೂಗಳ ಜಾಗೃತಿಯೇ ಕಾರಣ ಎಂದು ಹೇಳಿದರು. ಇನ್ನು ಸಿಎಂ ಕುರಿತು ಪ್ರತಾಪ್ ಸಿಂಹ ನೀಡಿರುವ ಹೇಳಿಕೆಗೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ.