ನವದೆಹಲಿ : ಕೇರಳ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಗುಜರಾತ್ ಜನರ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ತಮ್ಮ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿಯೇ ತಿರುಚಲಾಗಿದೆ, ನಾನು ಕ್ಷಮೆಯಾಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಗುಜರಾತ್ ಜನ ಅನಕ್ಷರಸ್ಥರು ಎಂದು ಖರ್ಗೆ ನೀಡಿದ್ದ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಕ್ಷಮೆಯಾಚಿಸಿದ್ದಾರೆ. ಕೇರಳದಲ್ಲಿ ಮಾಡಿದ ಚುನಾವಣಾ ಭಾಷಣದ ಬಗ್ಗೆ ಖರ್ಗೆ ಸ್ಪಷ್ಟೀಕರಣ ನೀಡಿದ್ದು, ತಮ್ಮ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮುಡಾ ಕೇಸ್: ಹೈಕೋರ್ಟ್ ಮೆಟ್ಟಿಲೇರಿದ ಇಡಿ, ಸಿದ್ದು ಕುಟುಂಬಕ್ಕೆ ಮತ್ತೆ ಸಂಕಷ್ಟ..!
ಗುಜರಾತ್ ಜನರ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ನಾವು ಎಂದೂ ಹೊಂದಿಲ್ಲ. ಗುಜರಾತ್ ಜನರ ಬಗ್ಗೆ ತಮಗೆ ಯಾವಾಗಲೂ ಗೌರವವಿದೆ ಮತ್ತು ಮುಂದೆಯೂ ಇರುತ್ತದೆ. ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಕೇರಳದ ಜನರ ಶಿಕ್ಷಣ ಮತ್ತು ಬುದ್ಧಿವಂತಿಕೆಯನ್ನು ಶ್ಲಾಘಿಸಿದರು. ಗುಜರಾತ್ ಮತ್ತು ಇತರ ಸ್ಥಳಗಳಲ್ಲಿರುವಂತೆ, ಕಡಿಮೆ ಶಿಕ್ಷಣ ಹೊಂದಿರುವವರನ್ನು ಮೂರ್ಖರನ್ನಾಗಿಸಬಹುದು ಎಂದು ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ಅವರು ಟೀಕಿಸಿದ್ದರು. ಕೇರಳದ ಮತದಾರರನ್ನು ದಾರಿ ತಪ್ಪಿಸುವುದು ಅಸಾಧ್ಯ ಎಂದು ಅವರು ಹೇಳಿದ್ದರು.
ಈ ಹೇಳಿಕೆಯ ನಂತರ, ಭಾರತೀಯ ಜನತಾ ಪಕ್ಷವು ಕಾಂಗ್ರೆಸ್ ವಿರುದ್ಧ ಹೋರಾಟ ಆರಂಭಿಸಿತು. ಇದು ಕಾಂಗ್ರೆಸ್‌ನ ಒಡೆದು ಆಳುವ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಬಿಜೆಪಿ ವಕ್ತಾರ ಶಹಜಾದ್ ಪೂನಾವಾಲಾ ಹೇಳಿದ್ದರು. ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಈ ಹೇಳಿಕೆಯನ್ನು ನಾಚಿಕೆಗೇಡಿನ ಸಂಗತಿ ಎಂದು ಕರೆದರು.