ಮೈಸೂರು : ಸಿದ್ದರಾಮಯ್ಯ ಅವತ್ತು ಮಹದೇವಪ್ಪ ನೀವು ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ. ನಾನು ರಾಜಕೀಯವನ್ನೇ ಬಿಟ್ಟು ಬಿಡ್ತೀನಿ ಅಂತಾ ಅವತ್ತು ಏನಾದ್ರು ಬಕೆಟ್ ಇಟ್ಟಿದ್ದರೇ ತುಂಬೋಗಿರೋದು. ಅಷ್ಟು ಕಣ್ಣೀರ್ ಹಾಕಿದ್ರು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯರ ಕಾಲೆಳೆದಿದ್ದಾರೆ.
ಚಾಮುಂಡಿ ಬೆಟ್ಟದ ಭೇಟಿ ಬಳಿಕ ಮಾತನಾಡಿದ ಅವರು, ಮಾತೆತ್ತಿದ್ರೆ ನಾನು ಜೆಡಿಎಸ್ ಅಧ್ಯಕ್ಷ ಆಗಿದ್ದಾಗ 58 ಸೀಟು ಗೆದ್ದಿದ್ದೆವು ಅಂತಾರೆ. 1999ರಲ್ಲೂ ಅವರು ಅಧ್ಯಕ್ಷರಾಗಿದ್ದರು. ಆಗ ಎಷ್ಟು ಸೀಟು ಗೆದ್ದಿದ್ದರು? ಮಹದೇವಪ್ಪ, ಸಿದ್ದರಾಮಯ್ಯ ಇಬ್ಬರೂ ಮನೆಗೆ ಬಂದು ಕಣ್ಣೀರಿಟ್ಟಿದ್ದರು. ಸಿದ್ದರಾಮಯ್ಯನವರು ಒಮ್ಮೆ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಇನ್ನು ಹಿಂದೆ ಚುನಾವಣೆಯಲ್ಲಿ ದೇವೇಗೌಡರು, ನಾನು, ರೇವಣ್ಣ, ಮಹದೇವಪ್ಪ, ಸಿದ್ದರಾಮಯ್ಯ ಸೇರಿ ಬಹುತೇಕರು ಸೋತಿದ್ದೆವು. ಆಗ ನನಗೆ ರಾಜಕೀಯ ಬೇಡ ಅಂತ ಸಿದ್ದರಾಮಯ್ಯ ಕಣ್ಣೀರು ಹಾಕಿದ್ದರು. 2004ರಲ್ಲಿ ಮಂಡ್ಯ, ರಾಮನಗರದಲ್ಲಿ ಸಿದ್ದರಾಮಯ್ಯ ಪ್ರಚಾರಕ್ಕೆ ಬಂದಿಲ್ಲ. ನಾವು ಕೂಡ ಸಿದ್ದರಾಮಯ್ಯರನವರನ್ನು ಕರೆಯಲಿಲ್ಲ. ಸಿದ್ದರಾಮಯ್ಯ ಅಹಿಂದ ಅಂತ ಸಮುದಾಯಗಳ ಸಂಘಟನೆ ಮಾಡಿದ್ರು. ದೇವೇಗೌಡರಿಗೆ ಅನ್ಯಾಯ ಮಾಡಿದರು, ಬೆನ್ನಿಗೆ ಚೂರಿ ಹಾಕಿದರು. 2006ರಲ್ಲಿ ಕೇವಲ 200 ವೋಟ್ಗಳಲ್ಲಿ ಗೆದ್ದಾಗ ಹೇಗಿತ್ತು ನೆನಪಿಸಿಕೊಳ್ಳಿ? ಎಂದು ವಾಗ್ದಾಳಿ ನಡೆಸಿದರು.
ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಯಾಕೆ ಸೋತರು? ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯನವರಿಗಿಲ್ಲ. ಸಿದ್ದರಾಮಯ್ಯ ಅಹಿಂದ ಚಾಂಪಿಯನ್ ಅಂತ ಹೇಳಿಕೊಳ್ಳುತ್ತಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ಬಿಟ್ಟು ಬಂದು 5 ಸ್ಥಾನ ಗೆಲ್ಲಲಿ ಎಂದು ಸವಾಲು ಹಾಕಿದರು.
ವಸೂಲಿ ಮಾಡೋಕೆ ಅಂತಾನೆ ಮಗನ ನೇಮಕ..!
ಹಣ ವಸೂಲಿಗಾಗಿ ಸಿದ್ದರಾಮಯ್ಯ ತಮ್ಮ ಮಗನನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಸಿಎಂ ಮಗನ ವಸೂಲಿ ಹೇಗಿದೆ ಎಂಬುದು ಎಲ್ಲಾ ಅಧಿಕಾರಿಗಳಿಗೆ ಗೊತ್ತಿದೆ. ಸಿದ್ದರಾಮಯ್ಯಗೆ ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ನೈತಿಕತೆಯ ಇಲ್ಲ. ನಾನು ನನ್ನ ಮಗನನ್ನು ವಸೂಲಿಗಾಗಿ ರಾಜಕೀಯಕ್ಕೆ ತಂದಿಲ್ಲ. ಜನರ ಅಪೇಕ್ಷೆಯಂತೆ ನಿಖಿಲ್ ರಾಜಕೀಯಕ್ಕೆ ಬಂದಿದ್ದಾನೆ ಎಂದು ಸಿಎಂಗೆ ಟಾಂಗ್ ಕೊಟ್ಟರು