ಚಿತ್ರದುರ್ಗದಲ್ಲಿ ಜನಸೇನಾ ಪಕ್ಷದ ಹೆಜ್ಜೆ: 25 ರಂದು ಸದಸ್ಯತ್ವ ಅಭಿಯಾನ

ಚಿತ್ರದುರ್ಗ: ನೆರೆಯ ಆಂಧ್ರ ಪ್ರದೇಶದಲ್ಲಿ ತನ್ನದೇ ಆದ ರಾಜಕೀಯ ಪ್ರಭಾವ ಮೂಡಿಸಿರುವ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಾರಥ್ಯದ ‘ಜನಸೇನಾ ಪಕ್ಷ’ ಈಗ ಚಿತ್ರದುರ್ಗದ ಮೂಲಕ ತಳಮಟ್ಟದಿಂದ ಪಕ್ಷ ಸಂಘಟನೆಗೆ ಸಜ್ಜಾಗಿದೆ ಎಂದು ಪಕ್ಷದ ಸದಸ್ಯ ಡಿ.ಬಸವರಾಜ್ (ಬಿ.ಟಿ.ರಾಜ್) ತಿಳಿಸಿದ್ದಾರೆ.

ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ಕೋಟೆನಾಡು ಚಿತ್ರದುರ್ಗದ ಮೂಲಕ ಪಕ್ಷವು ರಾಜ್ಯ ಪ್ರವೇಶದ ಅಧಿಕೃತ ಘೋಷಣೆ ಮಾಡುತ್ತಿದ್ದು, ಇದರೊಂದಿಗೆ ಸದಸ್ಯತ್ವ ಅಭಿಯಾನಕ್ಕೂ ಭರ್ಜರಿ ಚಾಲನೆ ನೀಡಲಾಗುತ್ತಿದೆ.

ಚಿತ್ರದುರ್ಗದ ಚಳ್ಳಕೆರೆ ರಸ್ತೆಯಲ್ಲಿರುವ ಎಸ್‌ಜಿ ಕನ್ವೆನ್ಶನ್ ಹಾಲ್ ನಲ್ಲಿ ಏಪ್ರಿಲ್ 25 (ಶನಿವಾರ) ರಂದು ಬೆಳಿಗ್ಗೆ 9.30ರಿಂದ ಈ ಮಹತ್ವದ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ : ಸಿದ್ದರಾಮಯ್ಯಗೆ ಈಗ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ : ಜಾರಕಿಹೊಳಿ ಸ್ಫೋಟಕ ಹೇಳಿಕೆ

ಕಾರ್ಯಕ್ರಮಕ್ಕೆ ಆಂಧ್ರ ಪ್ರದೇಶ ವಿಧಾನ ಪರಿಷತ್ ಸದಸ್ಯ ನಾಗಬಾಬು ಹಾಗೂ ಜನಾಸೇನಾ ಪಕ್ಷದ ಆಂಧ್ರ ಪ್ರದೇಶ ಪ್ರಧಾನ ಕಾರ್ಯದರ್ಶಿ ರಾಮ್ ತಲ್ಲೂರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಪಕ್ಷದ ಸಂಘಟನೆಗೆ ಬಲ ನೀಡುವ ಪ್ರಮುಖ ಹುದ್ದೆಗಳ ಘೋಷಣೆ ನಡೆಯಲಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಆಯಾಮಗಳನ್ನು ತರುವ ಪ್ರಯತ್ನಕ್ಕೆ ಚಾಲನೆ ಸಿಗಲಿದೆ. ಜೊತೆಗೆ, ಯುವಜನತೆ ಮತ್ತು ಸಾಮಾನ್ಯ ಜನರನ್ನು ಸೆಳೆಯುವ ಉದ್ದೇಶದಿಂದ ರಾಜ್ಯವ್ಯಾಪಿ ಸದಸ್ಯತ್ವ ಅಭಿಯಾನ ಆರಂಭಗೊಳ್ಳಲಿದೆ.

ಜನಸೇನಾ ಪಕ್ಷವು ಸಾಮಾಜಿಕ ನ್ಯಾಯ, ಪಾರದರ್ಶಕತೆ ಹಾಗೂ ಜನಸಾಮಾನ್ಯರ ಹಿತಾಸಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸುವುದಾಗಿ ಘೋಷಿಸಿದ್ದು, ಕರ್ನಾಟಕದಲ್ಲೂ ಜನಪರ ರಾಜಕೀಯದ ಹೊಸ ಪರ್ಯಾಯವನ್ನು ರೂಪಿಸುವ ಸಂಕಲ್ಪ ವ್ಯಕ್ತಪಡಿಸಿದೆ ಎಂದು ಪಕ್ಷದ ಸದಸ್ಯ ಡಿ.ಬಸವರಾಜ್ (ಬಿ.ಟಿ.ರಾಜ್) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *