ಹಾಸನ : ಜೆಡಿಎಸ್ ಸಿದ್ಧಾಂತದಲ್ಲಿ ರಾಜಿಯಿಲ್ಲ ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ, ಬಿಜೆಪಿ ಮುಖಂಡ ಪ್ರೀತಂ ಗೌಡ ಹಾಸನದಲ್ಲಿ ಪ್ರತಿಕ್ರಿಯಿಸಿ ಟಾಂಗ್ ನೀಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಹೇಳಿರೋದು ಸರಿ ಇದೆ ಅವರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ. ನಮ್ಮ ಸಿದ್ಧಾಂತದ ಪ್ರಕಾರ ನಾವು ಕೆಲಸ ಮಾಡುತ್ತೇವೆ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿರುವ ಮತದಾರರು ನಮ್ಮೊಂದಿಗಿರುತ್ತಾರೆ. ಅವರಿಗೆ ಒಳ್ಳೆಯದಾಗಲಿ, ಇನ್ನೇನು ಹೇಳಬಹುದು.ಪ್ರಶ್ನೆ ಸರಿ ಇದೆ, ವ್ಯಕ್ತಿ ತಪ್ಪಿದೆ, ಜೆಡಿಎಸ್ ನಾಯಕರುಗಳಿಗೆ ಕೇಳಿ ಎಂದು ಪ್ರಶ್ನೆ ಮಾಡಿದರು. ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿರುವ ಕುಮಾರಣ್ಣನವರು, ನಮ್ಮ ಎನ್‌ಡಿಎ ನಾಯಕರು, ಅವರು ಅದಕ್ಕೆ ಒಪ್ಪುತ್ತಾರೋ ಇಲ್ವೋ ನನಗೆ ಗೊತ್ತಿಲ್ಲ ಎಂದರು.
ಇದನ್ನೂ ಓದಿ : ಜಮೀರ್ ಜೆಡಿಎಸ್‌ಗೆ ಹೋಗೋದಾದ್ರೆ ನಮ್ಮನ್ನೂ ಕರ್ಕೊಂಡ್ ಹೋಗ್ಲಿ : ಬಾಲಕೃಷ್ಣ
ಹೆಚ್.ಡಿ.ಕುಮಾರಸ್ವಾಮಿ ಮುಂದಿನ ಸಿಎಂ ಎಂಬ ಜೆಡಿಎಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರೀತಂ ಗೌಡ, ಎನ್‌ಡಿಎ ನೇತೃತ್ವದಲ್ಲಿ ಸಿಎಂ ಆಗ್ತಾರೆ, ಆದರೆ ಯಾರು ಸಿಎಂ ಆಗ್ತಾರೆ ಅನ್ನೋದು ಆವತ್ತಿನ ದಿನದಲ್ಲಿ ತೀರ್ಮಾನ ಆಗುತ್ತದೆ. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಆದ ಹಾಗೇ, ಬಿಹಾರದಲ್ಲಿ ಸಾಮ್ರಾಟ ಚೌಧರಿ ಆದ ರೀತಿಯಲ್ಲಿಯೇ ಕರ್ನಾಟಕದಲ್ಲೂ ಒಬ್ಬರು ಮುಖ್ಯಮಂತ್ರಿಯಾಗ್ತಾರೆ.ಕಾದು ನೋಡೋಣ ಎಂದು ಹೇಳಿದರು.
ನಾನು ಬಹಳ ತಾಳ್ಮೆಯಿಂದ ಇದ್ದೀನಿ..!
ನಿಖಿಲ್ ಯುವಕರಾಗಿದ್ದು. ಅವರು ಅವರ ಪಕ್ಷ ಸಿದ್ದಾಂತದ ಬಗ್ಗೆ ಮಾತಾಡಿದ್ದಾರೆ. ಅವರಿಗೆ ಆಲ್ ದಿ ಬೆಸ್ಟ್ ಒಳ್ಳೆಯದಾಗಲಿ ಎಂದು ಟಾಂಗ್ ನೀಡಿದರು. ಹೆಚ್‌ಡಿಕೆ ಮುಂದಿನ ಸಿಎಂ ಆಗ್ತಾರೆ ಎಂದು ಜೆಡಿಎಸ್ ನಾಯಕರು ತಮ್ಮ ಮನಸ್ಸಿನ ಮಾತನ್ನು ಹೇಳಿಕೊಂಡಿದ್ದಾರೆ. ನನ್ನ ಮನಸ್ಸಿನ ಇಚ್ಚೆ ನಾನು ಸಾರ್ವಜನಿಕವಾಗಿ ಹೇಳಿದ್ರೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಗೌರವ ತರಲ್ಲ. ನಾನು ಗೌರವವನ್ನು ಕಾಪಾಡಿಕೊಂಡು, ರಾಜಕಾರಣವನ್ನು ಮಾಡುವಂತ ಅನಿವಾರ್ಯತೆ ಇದೆ. ಹಾಗಾಗಿ ನಾನು ತಾಳ್ಮೆಯಿಂದ ಇದ್ದೀನಿ ಎಂದು ಹೇಳಿದರು.
ಮ್ಯಾರಥಾನ್ ರೇಸ್ ಪಾಲಿಟಿಕ್ಸ್. 100 ಮೀಟರ್ ಓಡೋರು ಓಡಲಿ, ಸುಸ್ತಾಗಿ ನೀರು ಕುಡಿಯೋಕೆ ಕೂರುತ್ತಾರೆ. ನಾನು ಮ್ಯಾರಥಾನ್ ರೇಸ್ ನಿಧಾನವಾಗಿ ಓಡ್ತೀನಿ, ಎಲ್ಲರ ಸಹಕಾರ ಇರಲಿ. ಹಾಸನ ಕ್ಷೇತ್ರಕ್ಕೆ ಮುಂದಿನ ಕ್ಯಾಂಡಿಡೇಟ್ ನೀವೇನಾ ಎಂಬ ಪ್ರಶ್ನೆಗೆ ನಗುತ್ತಲೆ ಉತ್ತರಿಸಿದ ಪ್ರೀತಂ ಗೌಡ, ಯಾರಿಗೇನು ಅನುಮಾನ ಇದೆಯಾ ಎಂದು ನಾನೇ ಮುಂದಿನ ಕ್ಯಾಂಡಿಡೇಟ್ ಎಂದು ವಿಶ್ವಾಸ ವ್ಯಕ್ತಪಡಿಸಿದರು.