ನವದೆಹಲಿ : ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇಂದು ಕೊಲ್ಕತ್ತಾ ಹೈಕೋರ್ಟ್ಗೆ ವಕೀಲರ ಕೋಟ್ ಧರಿಸಿ ಹಾಜರಾಗಿದ್ದರು. ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣವನ್ನು ಅವರು ವಾದ ಮಂಡಿಸಿದರು.
ಟಿಎಂಸಿಯ ಹಿರಿಯ ನಾಯಕ ಚಂದ್ರಿಮಾ ಭಟ್ಟಾಚಾರ್ಯ ಮತ್ತು ಕಲ್ಯಾಣ್ ಬ್ಯಾನರ್ಜಿ ಅವರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿದ್ದ ಮಮತಾ ಬ್ಯಾನರ್ಜಿ ತಾವೇ ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ವಕೀಲ ವೃತ್ತಿಯಲ್ಲಿ ನಿಜಕ್ಕೂ ಅನುಭವ ಹೊಂದಿದ್ದಾರಾ? ಎಂಬ ಪ್ರಶ್ನೆಗಳು ಮೂಡಿವೆ.
2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಪಕ್ಷದ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಹಲವಾರು ಟಿಎಂಸಿ ಕಾರ್ಯಕರ್ತರು ಹಿಂಸಾಚಾರವನ್ನು ಎದುರಿಸಿದ್ದರು ಎಂದು ಅರ್ಜಿಯಲ್ಲಿ ಹೈಕೋರ್ಟ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಲಾಗಿದೆ. ಟಿಎಂಸಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕೂಡ ಅರ್ಜಿಯಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ : ವಿಜಯ್ ಪ್ರಮಾಣವಚನ, ಮಿಳುನಾಡಿನಲ್ಲಿ ದಳಪತಿ ಅಬ್ಬರ ಶುರು..!
ಮೇ 12ರಂದು ಕೊಲ್ಕತ್ತಾ ಹೈಕೋರ್ಟ್ಗೆ ಈ ಬಗ್ಗೆ ಅರ್ಜಿ ಸಲ್ಲಿಸಲಾಯಿತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥಸಾರಥಿ ಸೇನ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಈ ಪ್ರಕರಣದ ವಿಚಾರಣೆ ಇಂದು ನಡೆಯಿತು.
ಈ ಪ್ರಕರಣದ ವಿಚಾರಣೆ ಮುಗಿದ ಬಳಿಕ ನ್ಯಾಯಾಲಯದ ಆವರಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರು ಹೈಕೋರ್ಟ್ನಿಂದ ಹೊರಬರುತ್ತಿದ್ದಂತೆ, ವಕೀಲರ ಒಂದು ವಿಭಾಗವು ಅವರನ್ನು ‘ಕಳ್ಳಿ’ ಎಂದು ಕರೆದಿದೆ ಎಂದು ಆರೋಪಿಸಲಾಗಿದೆ. ಟಿಎಂಸಿ ಮುಖಂಡರು ಮತ್ತು ವಕೀಲರು ಆಕೆಯನ್ನು ಸುರಕ್ಷಿತವಾಗಿ ಕೋರ್ಟ್ ಆವರಣದಿಂದ ಹೊರತರಲು ಹರಸಾಹಸ ಪಡಬೇಕಾಯಿತು.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪಶ್ಚಿಮ ಬಂಗಾಳದ ಬಾರ್ ಕೌನ್ಸಿಲ್ಗೆ ಪತ್ರ ಬರೆದಿದ್ದು, ಮಮತಾ ಬ್ಯಾನರ್ಜಿ ಕೊಲ್ಕತ್ತಾ ಹೈಕೋರ್ಟ್ನಲ್ಲಿ ವಕೀಲರ ಗೌನ್ನಲ್ಲಿ ಕಾಣಿಸಿಕೊಂಡಿದ್ದಕ್ಕೆ ವಿವರ ಕೇಳಿದ್ದಾರೆ. ಮಮತಾ ಬ್ಯಾನರ್ಜಿ ಅವರ ಕಾನೂನು ಅಭ್ಯಾಸದ ದಾಖಲಾತಿ ಮತ್ತು ಪ್ರಾಕ್ಟಿಸ್ಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ಬಿಸಿಐ ಕೋರಿದೆ.