ಹಿರಿಯೂರು ಉಪಚುನಾವಣೆ ಅಖಾಡಕ್ಕೆ ಮೈತ್ರಿ ಮಾಸ್ಟರ್ ಪ್ಲಾನ್, ದಿ.ಸುಧಾಕರ್ ಪುತ್ರನಿಗೆ ‘ಕೈ’ ಮಣೆ..!?

ಚಿತ್ರದುರ್ಗ : ಮಾಜಿ ಸಚಿವ ಡಿ.ಸುಧಾಕರ್ ಅವರ ನಿಧನದಿಂದ ತೆರವಾಗಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ದಿನಾಂಕ ಘೋಷಣೆಗೂ ಮುನ್ನವೇ ರಾಜ್ಯರಾಜಕಾರಣದಲ್ಲಿ ತೆರೆಮರೆಯ ರಾಜಕೀಯ ಚಟುವಟಿಕೆಗಳು ಶುರುವಾಗಿದೆ. ಒಂದು ಕಡೆ ಮೈತ್ರಿಕೂಟದ ಪರವಾಗಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೆರೆಮರೆಯ ಕೊನೆಹಂತದ ಕಸರತ್ತು ನಡೆಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿ ದಿವಂಗತ ಸುಧಾಕರ್ ಅವರ ಪುತ್ರನಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ತೀವ್ರಗೊಂಡಿದೆ.

ಸಚಿವ ಡಿ.ಸುಧಾಕರ್ ನಿಧನದಿಂದ ತೆರವಾದ ಹಿರಿಯೂರು ಕ್ಷೇತ್ರವನ್ನು ಈ ಬಾರಿ ಮೈತ್ರಿಕೂಟದ ಲೆಕ್ಕಾಚಾರದಲ್ಲಿ ಜೆಡಿಎಸ್ ತನ್ನದಾಗಿಸಿಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ ಎಂದು ತಿಳಿದುಬಂದಿದೆ. ಶೀಘ್ರದಲ್ಲೇ ರಾಜ್ಯ ಬಿಜೆಪಿ ನಾಯಕರೊಂದಿಗೂ ಸಭೆ ನಡೆಸಿ ಜಂಟಿ ಅಭ್ಯರ್ಥಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಹಿರಿಯೂರು ಕ್ಷೇತ್ರದ ಒಕ್ಕಲಿಗ ಮತ್ತು ಯಾದವ ಸಮುದಾಯಗಳು ನಿರ್ಣಾಯಕ ಪಾತ್ರವಹಿಸಲಿವೆ. ಈ ಮತಗಳ ಸಮೀಕರಣದ ಮೇಲೆ ಕಣ್ಣಿಟ್ಟಿರುವ ಕುಮಾರಸ್ವಾಮಿ, ಈ ಎರಡೂ ಸಮುದಾಯಗಳಲ್ಲಿ ಸಮಾನ ಪ್ರಭಾವ ಹೊಂದಿರುವ ಪ್ರಬಲ ನಾಯಕನಿಗೆ ಟಿಕೆಟ್ ನೀಡುವ ಸುಳಿವನ್ನು ಸ್ಥಳೀಯ ಜೆಡಿಎಸ್ ಮುಖಂಡರಿಗೆ ನೀಡಿದ್ದಾರೆ. ಇತ್ತ ಕಾಂಗ್ರೆಸ್ ಪಾಳಯದಲ್ಲೂ ಉಪಚುನಾವಣೆಯ ಟಿಕೆಟ್ ಫೈಟ್ ಜೋರಾಗಿದೆ. ಮಾಜಿ ಸಚಿವ ದಿವಂಗತ ಡಿ. ಸುಧಾಕರ್ ಅವರ ನಿಧನದಿಂದಾಗಿ ಉಂಟಾಗಿರುವ ಅನುಕಂಪದ ಅಲೆಯನ್ನೇ ಬಂಡವಾಳ ಮಾಡಿಕೊಳ್ಳಲು ಬೆಂಬಲಿಗರು ಮುಂದಾಗಿದ್ದಾರೆ. ಸುಧಾಕರ್ ಅವರ ಪುತ್ರ ಸುಹಾಸ್ ಅವರಿಗೆ ಹಿರಿಯೂರು ಬೈಎಲೆಕ್ಷನ್ ಟಿಕೆಟ್ ನೀಡಬೇಕೆಂದು ಕ್ಷೇತ್ರದ ನೂರಾರು ಬೆಂಬಲಿಗರು ಹಾಗೂ ಕಾರ್ಯಕರ್ತರು ಬಿಗಿ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸುಹಾಸ್ ಬೆಂಬಲಿಗರ ದಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಧಿಕೃತವಾಗಿ ಟಿಕೆಟ್‌ಗಾಗಿ ಆಗ್ರಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *