ಕ್ರಾಂತಿಯೂ ಆಗಲ್ಲ – ವಾಂತಿಯೂ ಆಗಲ್ಲ, ಸಿದ್ದರಾಮಯ್ಯನ್ನ ತೆಗೆಯೋದು ಕಷ್ಟ..!

ಮೈಸೂರು : ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಆಗಲ್ಲ ವಾಂತಿಯೂ ಆಗಲ್ಲ! ನನಗೆ ಸಿದ್ದರಾಮಯ್ಯ ಬಗ್ಗೆ ಗೊತ್ತಿದೆ. ಅವರು ನಮ್ಮಲ್ಲಿಯೇ ಇದ್ದವರು. ಸಿಎಂ ಸ್ಥಾನದಿಂದ ಅವರನ್ನ ತೆಗೆಯೋದು ಕಷ್ಟ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಅವರು, ನನಗೆ ಸಿದ್ದರಾಮಯ್ಯನವರ ಗುಣ ಗೊತ್ತಿದೆ! ಅವರು ನಮ್ಮ ಪಕ್ಷದಲ್ಲೇ ಇದ್ದಾಗಲೇ ಅವರ ಗುಣ ತಿಳಿದುಕೊಂಡಿದ್ದೇನೆ! ಹೀಗಾಗಿ ಯಾವ ಬದಲಾವಣೆಯೂ ಅಗುವುದಿಲ್ಲ ಡಿ.ಕೆ.ಶಿವಕುಮಾರ್ ಯಾವಾಗಲೂ ದೇವರ ಜೊತೆ ಮಾತನಾಡುತ್ತಾರೆ. ದೇವರು ಅವರಿಗೆ ಏನೇನು ಹೇಳಿದ್ದಾನೋ ನಮಗೇನು ಗೊತ್ತು? ಅದೇನಿದ್ದರೂ ಡಿ.ಕೆ. ಶಿವಕುಮಾರ್ ಹಾಗೂ ದೇವರಿಗೆ ಸಂಬಂಧಪಟ್ಟ ವಿಚಾರ. ಹಾಗಂತ ಡಿಕೆಶಿ ಅವ್ರೇ ಹೇಳಿದ್ದಾರೆ ಎಂದರು.

ಇನ್ನು 2028ಕ್ಕೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಎಂಬ ಡಿಕೆಶಿ ಹೇಳಿಕೆಗೆ ಉತ್ತರಿಸಿ, 20, 10 ವರ್ಷ ನಾವೇ ಎಂದು ಹೇಳಿದವರು ಏನಾಗಿದ್ದಾರೆ ಎಂಬುದು ನನಗೆ ಗೊತ್ತಿದೆ. 2028ಕ್ಕೆ ಏನೇನಾಗುತ್ತೊ ಯಾರಿಗೆ ಗೊತ್ತು ಬಿಡಿ. ಈಗ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎನ್ನುವ ಇರಾದೆ ಈ ಸರ್ಕಾರಕ್ಕೆ ಇಲ್ಲ! ಪ್ರತಿಯೊಂದು ವಿಷಯವನ್ನೂ ಕೇಂದ್ರದ ಮೇಲೆ ಹಾಕಿ ನುಣುಚಿಕೊಳ್ಳುವ ಕೆಲಸ ಮಾಡುತ್ತಿದೆ ಎಂದರು.

ಮುಖ್ಯಮಂತ್ರಿಗಳು ಮನಸು ಮಾಡಿದರೆ ಇದು ಅತ್ಯಂತ ಚಿಕ್ಕ‌ ವಿಚಾರ. ಕೆಲವು ನಿಮಿಷಗಳಲ್ಲಿ ಬಗೆಹರಿಸಬಹುದಾದ ವಿಷಯ ಇದಾಗಿದೆ. ಆದರೆ, ಸಿಎಂ ಅವರು ಪ್ರತಿಯೊಂದಕ್ಕೂ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ. ದೇಶದ ಯಾವ ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಿದ್ದಾರೆ ಹೇಳಿ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ಈ ಸಮಸ್ಯೆ ವಿಚಾರದಲ್ಲಿ ಜನ ಪ್ರತಿನಿಧಿಗಳನ್ನು ಕರೆದು ಮಾತನಾಡುವುದು ಏನಿದೆ? ಮುಖ್ಯಮಂತ್ರಿಗಳೇ ನೇರವಾಗಿ ನಿರ್ಧಾರ ಕೈಗೊಳ್ಳಬಹುದು. ನೇರವಾಗಿ ಬೆಳೆಗಾರರ ಜತೆ ಮಾತನಾಡಿ ಬಿಕ್ಕಟ್ಟನ್ನು ಬಗೆಹರಿಸಬಹುದು. ಅದನ್ನು ಮಾಡದೇ ಕೇವಲ ರಾಜಕೀಯ ಮಾಡುವುದರಲ್ಲಿ ಈ ಸರಕಾರ ಮುಳುಗಿದೆ ಎಂದು ಅವರು ಟೀಕಿಸಿದರು.

ಸಿಎಂ ನೇರವಾಗಿ, ಮುಕ್ತವಾಗಿ ಕಬ್ಬು ಬೆಳೆಗಾರರ ಪರವಾಗಿ ನಿರ್ಧಾರ ತೆಗೆದುಕೊಳ್ಳಬಹುದು. ಸಿಎಂ ಅವರು ಆ ಕೆಲಸ ಮಾಡುವುದು ಬಿಟ್ಟು ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಬೆಳಗಾವಿಯ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಕ್ಕರೆ ಲಾಬಿಯ ಒತ್ತಡಕ್ಕೆ ಅವರು ಮಣಿದಿರುವ ಸಾಧ್ಯತೆ ಇದೆ. ಅಂತಹ ಒತ್ತಡಕ್ಕೆ ಮಣಿಯದೆ ಮೊದಲು ಬೆಳೆಗಾರರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಸಚಿವ ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಜೆಡಿಎಸ್ ನಾಯಕರು ಸಕ್ಕರೆ ಕಾರ್ಖಾನೆ ಹೊಂದಿಲ್ಲ..!
ಬೆಳಗಾವಿಯ ಜಿಲ್ಲೆಯಲ್ಲಿ ಎಲ್ಲಾ ಪಕ್ಷಗಳ ನಾಯಕರು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಆಗಿದ್ದನ್ನು ಗಮನಿಸಿದ್ದೇನೆ. ಜೆಡಿಎಸ್ ಪಕ್ಷದ ಯಾವ ನಾಯಕ ಕೂಡ ಕಬ್ಬು ಕಾರ್ಖಾನೆ ಹೊಂದಿಲ್ಲ. ಆ ಪೈಕಿ ಬಂಡೆಪ್ಪ ಕಾಶಂಪೂರ ಅವರ ಕಾರ್ಖಾನೆ ಒಂದಿತ್ತು. ಕೆಲವು ದಿನಗಳ ಹಿಂದೆ ಅವರು ಅದನ್ನು ಕೂಡ ಮಾರಿದ್ದಾರೆ. ಹೀಗಾಗಿ ನಮ್ಮ ಪಕ್ಷದಲ್ಲಿ ಯಾರೊಬ್ಬರ ಬಳಿಯೂ ಸಕ್ಕರೆ ಕಾರ್ಖಾನೆ ಇಲ್ಲ ಎಂದು ಕೇಂದ್ರ ಸಚಿವರು ಹೇಳಿದರು.

Leave a Reply

Your email address will not be published. Required fields are marked *