ಜೈಲಿನಲ್ಲಿ ಉಗ್ರರಿಗೆ ರಾಜಾತಿಥ್ಯ: ‘ಪರಮೇಶ್ವರ್ ರಾಜ್ಯ ಕಂಡ ಅತ್ಯಂತ ದುರ್ಬಲ ಗೃಹ ಸಚಿವ’

ಬೆಂಗಳೂರು : ರಾಜ್ಯದ ಜೈಲಿನಲ್ಲಿ ಬಂಧಿತನಾಗಿರುವ ಐಸಿಸ್ ಉಗ್ರನ ಬಳಿ ಸ್ಮಾರ್ಟ್ ಫೋನ್ ಇದೆ. ಇದು ಕೇವಲ ಜೈಲಿನ ನಿಯಮದ ಉಲ್ಲಂಘನೆ ಮಾತ್ರವಲ್ಲ, ಬದಲಿಗೆ ರಾಷ್ಟ್ರೀಯ ಭದ್ರತೆಗೂ ಧಕ್ಕೆಯಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ವಿಧ್ವಂಸಕ ಕೃತ್ಯ ನಡೆಸಿ, ಜೈಲು ಪಾಲಾಗಿರುವ ಉಗ್ರರ ಕೈಗೆ ಫೋನ್ ಲಭಿಸಿದರೆ ಮುಂದಾಗುವ ಅನಾಹುತ ಎಂತದ್ದು? ಏನು ಕೇಳಿದರೂ ನನಗೆ ಈ ಕುರಿತು ಮಾಹಿತಿ ಇಲ್ಲ ಎನ್ನುವ ಗೃಹ ಸಚಿವರಾದ ಜಿ.ಪರಮೇಶ್ವರ್‌ ಅವರಿಗೆ ಈ ಗಂಭೀರ ಲೋಪದ ಕುರಿತಾದರೂ ಮಾಹಿತಿ ಇದೆಯೇ?

ಇನ್ನು ಜೈಲು ಇರುವುದು ಅಪರಾಧಿಗಳಿಗೆ ಶಿಕ್ಷೆ ನೀಡಲು. ಅವರಲ್ಲಿ ಪರಿವರ್ತನೆ ತರಲಿ ಅಂತಲೇ ಹೊರತು ರೆಸಾರ್ಟ್ ಮಾದರಿಯ ವಾಸ್ತವ್ಯ ನೀಡೋದಕ್ಕಲ್ಲ. ಪರಮೇಶ್ವರ್ ಅವರು ಈಗಾಗಲೇ ತಾನು ರಾಜ್ಯ ಕಂಡ ಅತ್ಯಂತ ದುರ್ಬಲ ಗೃಹ ಸಚಿವ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ರು.

ಮೇಲಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಪೊಲೀಸ್ ಇಲಾಖೆ ಹಲ್ಲು ಕಿತ್ತ ಹಾವಿನಂತಾಗಿದೆ. ಗಲಭೆಕೋರರಿಗೆ, ದುಷ್ಕರ್ಮಿಗಳಿಗೆ, ಉಗ್ರಗಾಮಿಗಳಿಗೆ ರಕ್ಷಣೆ, ನೆರವು ನೀಡುವ ಇಂತಹ ಭ್ರಷ್ಟ ಸರ್ಕಾರದ ಅವಧಿಯಲ್ಲಿ ರಾಜ್ಯ ಸುರಕ್ಷಿತವಾಗಿರಲು ಸಾಧ್ಯವೇ? ಜೈಲಿನಲ್ಲಿರುವ ಅಪರಾಧಿಗಳು ಮತ್ತು ಭಯೋತ್ಪಾದಕರಿಗೆ ಇಲಾಖೆಯ ಒಳಗಿನವರ ಕೃಪಾಕಟಾಕ್ಷವಿಲ್ಲದೆ ಇಂತಹ ಸವಲತ್ತುಗಳು ಲಭಿಸಲು ಸಾಧ್ಯವೇ ಇಲ್ಲ.

ನಮ್ಮ ಗೃಹ ಸಚಿವರು ರಾಜ್ಯದ ಸುರಕ್ಷತೆ ತನ್ನ ಜವಾಬ್ದಾರಿ ಎಂದು ಅರಿತುಕೊಳ್ಳದಿದ್ದರೆ ರಾಜ್ಯವನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ. ಕರ್ನಾಟಕದ ಜನತೆಗೆ ಉತ್ತಮ ಆಡಳಿತ ಬೇಕೇ ಹೊರತು ಇಂತಹ ಅಸಮರ್ಥ, ದುರ್ಬಲ ಸರ್ಕಾರ ಖಂಡಿತ ಅಲ್ಲ ಎಂದು ಸರ್ಕಾರಕ ವಿರುದ್ಧ ಕಿರಿಕಾರಿದ್ರು.

Leave a Reply

Your email address will not be published. Required fields are marked *