ದೆಹಲಿಯಲ್ಲಿ ಭಾರೀ ಸ್ಫೋಟ, ಸ್ಥಳಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿ: ಹೇಳಿದ್ದೇನು?

ನವದೆಹಲಿ : ದೆಹಲಿಯಲ್ಲಿ ಸಂಭವಿಸಿದ ಕಾರು ಸ್ಫೋಟ ದೇಶವನ್ನೇ ಬೆಚ್ಚಿಬೀಳಿಸಿದೆ. ಕೆಂಪು ಕೋಟೆ ಸಮೀಪದ ಮೆಟ್ರೋ ನಿಲ್ದಾಣದ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಘಟನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ಪೊಲೀಸ್ ಆಯುಕ್ತ ಹಾಗೂ ವಿಶೇಷ ಶಾಖೆಯ ಉಸ್ತುವಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಇದನ್ನೂ ಓದಿ : #BREAKING ಕೆಂಪು ಕೋಟೆ ಬಳಿ ಸ್ಫೋಟ, 8 ಸಾವು ಹಲವರಿಗೆ ಗಾಯ: ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್

ಬಳಿಕ ಮಾತನಾಡಿದ ಅವರು, ನಾನು ದೆಹಲಿ ಸಿಪಿ ಹಾಗೂ ವಿಶೇಷ ಶಾಖೆಯ ಉಸ್ತುವಾರಿಯೊಂದಿಗೆ ಮಾತನಾಡಿದ್ದೇನೆ. ಅವರು ಸ್ಥಳದಲ್ಲಿದ್ದಾರೆ. ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದರು.

ಇನ್ನು ಎಲ್ಲಾ ಆಯಾಮಗಳನ್ನು ಪರಿಗಣಿಸಿ ತನಿಖೆ ಮುಂದುವರಿಸುತ್ತೇವೆ. ಎನ್‌ಐಎ, ಎನ್‌ಎಸ್‌ಜಿ, ಮತ್ತು ಎಫ್‌ಎಸ್‌ಎಲ್ ತಂಡಗಳು ಕೆಲಸ ಮಾಡುತ್ತಿವೆ. ಸಿಸಿಟಿವಿ ದೃಶ್ಯಾವಳಿಗಳ ವಿಶ್ಲೇಷಣೆಯೂ ಪ್ರಾರಂಭವಾಗಿದೆ. ಘಟನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಬಹಿರಂಗವಾಗಲಿದೆ ಎಂದು ಅಮಿತ್‌ ಶಾ ಸ್ಪಷ್ಟಪಡಿಸಿದರು.

ಘಟನೆಯ ನಂತರ ಅಮಿತ್ ಶಾ ಅವರು, ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯ ವೈದ್ಯರು ನೀಡಿದ ಮಾಹಿತಿಯ ಪ್ರಕಾರ ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಅಮಿತ್ ಶಾ ಅವರು ಗಾಯಾಳುಗಳ ಕುಟುಂಬಗಳೊಂದಿಗೆ ಮಾತನಾಡಿ, ಅವರಿಗಾಗಿ ಸರ್ಕಾರದಿಂದ ಎಲ್ಲಾ ರೀತಿಯ ಸಹಾಯ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಸ್ಫೋಟದ ಕೆಲವೇ ನಿಮಿಷಗಳಲ್ಲಿ ದೆಹಲಿ ಅಪರಾಧ ಶಾಖೆ, ವಿಶೇಷ ಶಾಖೆ, ಎಫ್‌ಎಸ್‌ಎಲ್ ಹಾಗೂ ಎನ್‌ಐಎ ತಂಡಗಳು ಸ್ಥಳಕ್ಕೆ ಆಗಮಿಸಿವೆ. ಸ್ಫೋಟದ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹ ನಡೆಯುತ್ತಿದೆ.

ದೆಹಲಿ ಪೊಲೀಸ್ ಹೈ ಅಲರ್ಟ್ ಘೋಷಣೆ..!

ಸ್ಫೋಟದ ನಂತರ ದೆಹಲಿಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪ್ರಮುಖ ಸಾರಿಗೆ ಕೇಂದ್ರಗಳು, ವಿಮಾನ ನಿಲ್ದಾಣಗಳು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆ ಹೆಚ್ಚಿಸಲಾಗಿದೆ. ನಾಗರಿಕರಿಗೆ ಯಾವುದೇ ಸಂಶಯಾಸ್ಪದ ವಸ್ತು ಅಥವಾ ವ್ಯಕ್ತಿ ಕಂಡರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ವಿನಂತಿ ಮಾಡಲಾಗಿದೆ.

ಅಧಿಕಾರಿಗಳು ಸ್ಫೋಟದ ಉದ್ದೇಶ, ಹಿನ್ನೆಲೆ ಹಾಗೂ ಉಗ್ರ ಸಂಪರ್ಕಗಳ ಕುರಿತು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಸ್ಫೋಟ ನಡೆದ ಕಾರು ಕೆಲ ಗಂಟೆಗಳ ಮೊದಲು ಪಾರ್ಕ್ ಮಾಡಲಾಗಿತ್ತು ಎನ್ನಲಾಗಿದೆ.

Leave a Reply

Your email address will not be published. Required fields are marked *