ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ಗೆಲುವು, ತಮಿಳು ನಾಡು ಅರ್ಜಿ ಸುಪ್ರೀಂ ಕೋರ್ಟ್ ವಜಾ

ಬೆಂಗಳೂರು : ಕರ್ನಾಟಕದ ಮೇಕೆದಾಟು ಯೋಜನೆಯನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ. ಕರ್ನಾಟಕ ಮತ್ತು ತಮಿಳು ನಾಡು ಮಧ್ಯೆ ಕಾವೇರಿ ನೀರು ಹಂಚಿಕೆಯ ಮೇಕೆದಾಟು ಯೋಜನೆ ವಿವಾದದಲ್ಲಿ ಪ್ರವೇಶಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ನೀರಿನ ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಈ ಉದ್ದೇಶಕ್ಕಾಗಿ ರಚಿಸಲಾದ ತಜ್ಞರ ಸಮಿತಿ ನಿರ್ವಹಿಸುವುದು ಉತ್ತಮ ಎಂದು ಪುನರುಚ್ಚರಿಸಿದೆ.

ಕರ್ನಾಟಕದ ಮೇಕೆದಾಟು ಅಣೆಕಟ್ಟಿನ ವಿವರವಾದ ಯೋಜನಾ ವರದಿಯನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಇತ್ತೀಚೆಗೆ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಅನುಮೋದನೆಗಳು ನ್ಯಾಯಾಂಗದಿಂದ ಬರಬೇಕಿರುವುದು ಅಲ್ಲ. ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಬರಬೇಕು ಎಂದು ಹೇಳಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು, ತಮಿಳುನಾಡಿನ ಮನವಿಯನ್ನು ತಪ್ಪಾಗಿ ಗ್ರಹಿಸಲಾಗಿದೆ, ರಾಜ್ಯವು ಆದೇಶವನ್ನು ಮೇಲ್ವಿಚಾರಣೆ ಮಾಡಲು ಅಧಿಕಾರ ಹೊಂದಿರುವ ತಜ್ಞರ ಸಮಿತಿಯನ್ನು ಸಂಪರ್ಕಿಸಬೇಕಾಗಿತ್ತು ಎಂದು ಹೇಳಿತು. ಅಲ್ಲದೇ ಕೇಂದ್ರ ಜಲ ಆಯೋಗದ ನಿರ್ದೇಶನಗಳು ತಜ್ಞರ ಶಿಫಾರಸುಗಳನ್ನು ಆಧರಿಸಿವೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮೋದನೆಗಳು ವಿವರವಾದ ಯೋಜನಾ ವರದಿ ಅನುಮೋದನೆಗೆ ಪೂರ್ವಾಪೇಕ್ಷಿತವಾಗಿದೆ ಎಂದು ಪೀಠವು ಗಮನಿಸಿತು.

ಕರ್ನಾಟಕಕ್ಕೂ ಎಚ್ಚರಿಕೆ..!
ಇನ್ನು ಕರ್ನಾಟಕವು ಸಿಡಬ್ಲ್ಯುಸಿ ಅಥವಾ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಪಾಲಿಸಲು ವಿಫಲವಾದರೆ, ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಒಳಗಾಗುವ ಅಪಾಯವಿದೆ ಎಂದು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದೆ. ಕರ್ನಾಟಕವು ಎಲ್ಲಾ ನಿರ್ದೇಶನಗಳನ್ನು ಪಾಲಿಸಿದೆ ಎಂದು ಸಮರ್ಥಿಸಿಕೊಂಡಿತು, ತಮಿಳುನಾಡು ಎತ್ತಿರುವ ಅನೇಕ ಸಮಸ್ಯೆಗಳು ಉತ್ಪ್ರೇಕ್ಷವಾಗಿದೆ ಎಂದು ವಾದಿಸಿತು.

ವಿಚಾರಣೆಯಲ್ಲಿ ವಿವಾದದ ದೀರ್ಘ ಇತಿಹಾಸದ ಬಗ್ಗೆಯೂ ಟೀಕೆಗಳು ಬಂದವು. ಕರ್ನಾಟಕ-ತಮಿಳು ನಾಡು 50 ವರ್ಷಗಳಿಂದ ಕಾವೇರಿ ಜಲ ವಿವಾದ ಬಗ್ಗೆ ಹೋರಾಟ ನಡೆಸುತ್ತಿವೆ ಎಂದು ವಕೀಲರು ಗಮನಸೆಳೆದಾಗ, ಸಿಜೆಐ ಈ ನದಿ ತೀರದ ವಿವಾದಗಳು ಮುಂದುವರಿಯುತ್ತಲೇ ಇರುತ್ತವೆ, ನಾವು ಇಲ್ಲಿ ಇರುವುದಿಲ್ಲ ಎಂದು ಹೇಳಿದರು. ಮತ್ತೊಬ್ಬ ವಕೀಲರು ನದಿ ದೀರ್ಘವಾಗಿದ್ದರೆ ವಿವಾದಗಳು ದೀರ್ಘಕಾಲಿಕ ಎಂದು ವ್ಯಂಗ್ಯವಾಡಿದರು, ನ್ಯಾಯಾಲಯದಿಂದ ಲಘು ಪ್ರತಿಕ್ರಿಯೆ ಬಂದಿತು.

Leave a Reply

Your email address will not be published. Required fields are marked *