ಗದಗ : ಶಿರಹಟ್ಟಿ ಬಿಜೆಪಿ ಶಾಸಕ ಡಾ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣ ದಿನಕ್ಕೊಂದು ತಿರುವು ಪೆಡೆಯುತ್ತಿದೆ. ಚಂದ್ರು ಲಮಾಣಿ ಈಗ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರನ್ನು ಯಾವುದಾದರೊಂದು ಪ್ರಕರಣದಲ್ಲಿ ಸಿಲುಕಿಸುವ ಬಗ್ಗೆ ಸ್ವಾಮೀಜಿಯೊಬ್ಬರ ಕೈವಾಡ ಇರುವ ಆರೋಪ ಕೇಳಿಬಂದಿದೆ.
ಶಿರಹಟ್ಟಿ ತಾಲೂಕಿನ ಅದರಹಳ್ಳಿ ಕುಮಾರ ಮಹಾರಾಜರ ಸ್ವಾಮೀಜಿ ಹಾಗೂ ಬಿಜೆಪಿ ಕಾರ್ತಕರ್ತರೊಬ್ಬರು 2.36 ನಿಮಿಷಗಳ ಕಾಲ ಮಾತನಾಡಿರುವ ಆಡಿಯೋವೊಂದು ವೈರಲ್ ಆಗಿದೆ. ತಮ್ಮದೇ ಸಮುದಾಯದ ಶಾಸಕರ ವಿರುದ್ಧ ಬಂಜಾರ ಸಮಾಜದ ಸ್ವಾಮೀಜಿ ಮಸಲತ್ತು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಬೆಂಗಳೂರಿ ಟೀಮ್ ನಿಂದ ರೇಡ್ ಎಂಬ ಬಗ್ಗೆ ಆಡಿಯೋದಲ್ಲಿ ಪ್ರಸ್ತಾಪವಾಗಿದೆ. ಶಾಸಕರನ್ನು ಸಿಲುಕಿಸಲು ವ್ಯವಸ್ಥಿತ ರೀತಿಯಲ್ಲಿ ನಾವೆಲ್ಲ ಪ್ರಯತ್ನಿಸುತ್ತಿದ್ದೇವೆ. ಕೈಯಲ್ಲಿ ನೋಟು ಕೊಟ್ಟು ಅದಕ್ಕೆ ಕೆಂಪು ಬಣ್ಣ ಹಚ್ಚಿರುತ್ತಾರೆ ಎಂದಿದ್ದಾರೆ. ಇದು ದಾಳಿಯ ವೇಳೆಯಲ್ಲಿ ಬಹಿರಂಗವಾಗುತ್ತದೆ ಎನ್ನುವುದು ಆಡಿಯೋದಲ್ಲಿದೆ. ಇದು ಈಗ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಗುತ್ತಿಗೆದಾರನಿಂದ 5 ಲಕ್ಷ ಕಮಿಷನ್ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಶಾಸಕ
ಶಿರಹಟ್ಟಿ ಬಿಜೆಪಿ ಶಾಸಕ ಡಾ ಚಂದ್ರು ಲಮಾಣಿ ಅವರು ಶನಿವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.
ಸಂಕದಾಳ ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚೆಕ್ ಡ್ಯಾಂ ನಿರ್ಮಾಣ ಹಾಗೂ ತಡೆಗೋಡೆ ಕಾಮಗಾರಿಗೆ ₹1 ಕೋಟಿ ರುಪಾಯಿ ಮಂಜೂರಾಗಿತ್ತು. ಈ ಕಾಮಗಾರಿ ವಿಜಯರಾಜ ಪೂಜಾರ ಎನ್ನುವವರು ಗುತ್ತಿಗೆ ಪಡೆದಿದ್ದರು. ಕಾಮಗಾರಿ ಮುಂದುವರಿಸಬೇಕಾದಲ್ಲಿ ಒಟ್ಟು ₹11 ಲಕ್ಷ ಕಮಿಷನ್ ಬೇಡಿಕೆಯನ್ನು ಶಾಸಕರು ಇಟ್ಟಿದ್ದರು ಎನ್ನಲಾಗಿದೆ.
ಶನಿವಾರ ಇದೇ ಕಮಿಷನ್ ಹಣದಲ್ಲಿ ಮುಂಗಡವಾಗಿ ₹5 ಲಕ್ಷ ಹಣವನ್ನು ಶಿರಹಟ್ಟಿ ಶಾಸಕ ಡಾ ಚಂದ್ರು ಲಮಾಣಿ ಒಡೆತನದಲ್ಲಿ ಲಕ್ಷ್ಮೇಶ್ವರದಲ್ಲಿರುವ ಬಾಲಾಜಿ ಆಸ್ಪತ್ರೆಯಲ್ಲಿ ₹4.50 ಲಕ್ಷ ಹಾಗೂ ಸಮೀಪದ ಖಾಸಗಿ ಶಾಲೆಯೊಂದರಲ್ಲಿ ₹50 ಸಾವಿರ ಲಂಚದ ಹಣವನ್ನು ಪಡೆಯುವ ವೇಳೆಯಲ್ಲಿಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮೂರು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.