ಜನವರಿಗೆ ಸರ್ಕಾರ ಪತನ, ಬಿಜೆಪಿ ಶಾಸಕ ಸುನೀಲ್ ಕುಮಾರ್ ಸ್ಫೋಟಕ‌ ಭವಿಷ್ಯ

ದಕ್ಷಿಣ ಕನ್ನಡ : ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ಮರೆತು ಸಿಎಂ ಕುರ್ಚಿಗಾಗಿನ ಗೊಂದಲದಲ್ಲಿ ಕಾಲಹರಣ ಮಾಡುತ್ತಿದೆ. ಜನವರಿ ಹೊತ್ತಿಗೆ ಸರ್ಕಾರ ಪತನವಾಗಲಿದ್ದು, ಬಿಜೆಪಿ ಮಧ್ಯಂತರ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ ಎಂದು ಬಿಜೆಪಿ ಶಾಸಕ ವಿ.ಸುನಿಲ್‌ ಕುಮಾರ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಚಟುವಟಿಕೆಗಳನ್ನು ಸಂಪೂರ್ಣ ಮರೆಮಾಚಿದ್ದು, ನಾಯಕರು ಸಿಎಂ ಯಾರಾಗಬೇಕು ಎನ್ನುವ ಗೊಂದಲದಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಶಾಸಕರು ಪ್ರತ್ಯೇಕವಾಗಿ ಸಭೆ ಮಾಡುತ್ತಿದ್ದು, ಜನವರಿ ಹೊತ್ತಿಗೆ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ. ಹಾಗಾಗಿ ಮಧ್ಯಂತರ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಇನ್ನು ಕಳೆದ ಎರಡೂವರೆ ವರ್ಷದಿಂದ ಕಾಂಗ್ರೆಸ್‌ ಸರ್ಕಾರ ಕಾಲ ಹರಣ ಮಾಡಿದ್ದು, ಪಕ್ಷದವರೇ ನವೆಂಬರ್ ಕ್ರಾಂತಿ ಎನ್ನುವುದನ್ನು ಹುಟ್ಟುಹಾಕಿ ಚರ್ಚೆ ಮಾಡುತ್ತಿದ್ದಾರೆ. ಗ್ರಾಮದಿಂದ ವಿಧಾನಸೌಧ ತನಕ ಆಡಳಿತ ವ್ಯವಸ್ಥೆ ಕುಸಿತದ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ರಾಜ್ಯದ ಜನ ಕಾಂಗ್ರೆಸ್‌ಗೆ ಬಹುಮತ ಕೊಟ್ಟಾಗ ಒಳ್ಳೆಯ ಆಡಳಿತ ನಿರೀಕ್ಷಿಸಿದ್ದರು. ಆದರೆ, ಕಾಂಗ್ರೆಸ್‌ ನಾಯಕರು ರಾಜ್ಯದ ಅಭಿವೃದ್ಧಿ ವಿಚಾರ ಇಟ್ಟುಕೊಂಡು ದೆಹಲಿಗೆ ಹೋಗುತ್ತಿಲ್ಲ. ಬದಲಾಗಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹಾಗೂ ಮತ್ತೊಬ್ಬರ ಕುರ್ಚಿ ಎಳೆಯಲು ಹೋಗುತ್ತಿದ್ದಾರೆ. ಈ ಸರ್ಕಾರ ಯಾವಾಗ ಕುಸಿದು ಬೀಳಲಿದೆ ಎಂದು ಜನರು ಕೂಡ ಕಾದು ನೋಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದ ಜನರು ಈ ಹಿಂದೆಯೇ ಕಬ್ಬು ಬೆಳೆಗೆ ನಿರ್ದಿಷ್ಟ ಬೆಲೆ ನಿಗದಿಗೆ ಒತ್ತಾಯಿಸಿದ್ದರು. ಕಳೆದ 8 ದಿನಗಳಿಂದ ರೈತರು ರಸ್ತೆಯಲ್ಲಿದ್ದಾರೆ. ಆದರೆ, ಸರ್ಕಾರ ಕಾರ್ಖಾನೆ ಮಾಲೀಕರ ಕರೆದು ಮಾತನಾಡುತ್ತಿಲ್ಲ. ಕಾಂಗ್ರೆಸ್ ನಾಯಕರಿಗೆ ರೈತರು, ಕಾರ್ಮಿಕರು ಹಾಗೂ ಅಭಿವೃದ್ಧಿ ಮುಖ್ಯವಲ್ಲ. ಅವರಿಗೆ ಕೇವಲ ಯಾರು ಸಿಎಂ ಆಗುತ್ತಾರೆ? ಯಾರು ಮಂತ್ರಿಮಂಡಲ ಸೇರಬೇಕು? ಎನ್ನುವ ಚರ್ಚೆಯಲ್ಲೇ ಮಗ್ನರಾಗಿದ್ದಾರೆ ಎಂದು ಆರೋಪಿಸಿದರು.


Leave a Reply

Your email address will not be published. Required fields are marked *