ನನ್ನ ಉಸಿರು ಇರುವವರೆಗೂ ರಾಜಕೀಯದಲ್ಲೇ ಇರುತ್ತೇನೆ : ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದ ಕುರಿತು ಮಹತ್ವದ ಹೇಳಿಕೆಯೊಂದನ್ನ ನೀಡಿ ಅಚ್ಚರಿ ಮೂಡಿಸಿದ್ದಾರೆ.

ನಿನ್ನೆ ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ಉಸಿರು ಇರುವವರೆಗೂ ರಾಜಕೀಯದಲ್ಲೇ ಇರುತ್ತೇನೆ ಮತ್ತು ಜನರ ಸೇವೆ ಮಾಡುತ್ತೇನೆ. ರಾಜ್ಯ ರಾಜಕೀಯದಲ್ಲಿ ಗೆಲುವು-ಸೋಲು ಸಹಜವಾದದ್ದು. ನಾನು ನನ್ನ ರಾಜಕೀಯ ಜೀವನದಲ್ಲಿ ಸೋಲು-ಗೆಲುವು ಎರಡನ್ನೂ ಕಂಡಿದ್ದೇನೆ. ಆದರೆ ಚುನಾವಣೆಯಲ್ಲಿ ಸೋತಾಗಲೂ ನಾನು ಜನಸೇವೆಯನ್ನು ಎಂದಿಗೂ ಬಿಟ್ಟಿಲ್ಲ ಎಂದು ಹೇಳಿದರು.

ನನ್ನನ್ನು ಬೆಳೆಸಿದಂತೆಯೇ ನನ್ನ ಮಗನನ್ನೂ ಬೆಳೆಸಿ..!

ನಾನು ಸಿಎಂ ಆಗಿರೋದ್ರಿಂದ ಕ್ಷೇತ್ರಕ್ಕೆ ಹೆಚ್ಚು ಬಾರಿ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ನನ್ನ ಮಗ ಯತೀಂದ್ರ ಆಗಾಗ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ನೀವು ನನ್ನನ್ನು ಹೇಗೆ ಬೆಳೆಸಿದಿರೋ ಹಾಗೆಯೇ ಯತೀಂದ್ರನನ್ನೂ ರಾಜಕೀಯವಾಗಿ ಬೆಳೆಸಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಇನ್ನು ದೇವರ ಬಗ್ಗೆ ತಮ್ಮ ನಂಬಿಕೆ ಕುರಿತು ಕೂಡ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದೇವರ ಮೇಲಿನ ಭಕ್ತಿ ಶುದ್ಧವಾಗಿರಬೇಕು. ದೇವರು ಇದ್ದಾನೆ. ಭಕ್ತಿ ಎಲ್ಲರಲ್ಲೂ ಇರಬೇಕು. ಆದರೆ ಶುದ್ಧವಾದ ಭಕ್ತಿ ಇಲ್ಲದೆ ಎಷ್ಟೇ ದೇವರ ದರ್ಶನ ಮಾಡಿದರೂ ಅದರ ಪ್ರಯೋಜನವಾಗುವುದಿಲ್ಲ. ಯಾರನ್ನೂ ದ್ವೇಷಿಸದ ಭಕ್ತಿ ಇರಬೇಕು ಎಂದು ತಿಳಿಸಿದರು.

ನಮಗೂ ಹಾಗೂ ಇತರರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದಾಗ ಮಾತ್ರ ದೇವರು ಒಲಿಯುತ್ತಾನೆ. ದೇವರು ದೇವಸ್ಥಾನದಲ್ಲೇ ಮಾತ್ರ ಅಲ್ಲ, ಎಲ್ಲೆಡೆ ಇದ್ದಾನೆ. ಯಾರು ಶುದ್ಧ ಮನಸ್ಸಿನಿಂದ ದೇವರನ್ನು ಪೂಜಿಸುತ್ತಾರೋ ಅವರಿಗೆ ದೇವರು ಒಳ್ಳೆಯದನ್ನು ಮಾಡುತ್ತಾನೆ ಎಂದು ಹೇಳಿದರು.

ಇದೇ ವೇಳೆ, ದೇವರು ಪ್ರತಿಕ್ಷಣ ನಾವು ಮಾಡುವ ಕೆಲಸವನ್ನು ನೋಡುತ್ತಾನೆ. ಇತರರಿಗೆ ಕೆಟ್ಟದ್ದು ಬಯಸಿದರೆ ದೇವರು ಒಳ್ಳೆಯದು ಮಾಡುವುದಿಲ್ಲ. ನಾನು ಸದಾ ಇಡೀ ನಾಡಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Leave a Reply

Your email address will not be published. Required fields are marked *