ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎರಡೂವರೆ ವರ್ಷ ಪೂರ್ಣಗೊಂಡಿದೆ. ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ ಸಿದ್ದರಾಮಯ್ಯ ಅವರು ಈಗ ಸಿಎಂ ಕುರ್ಚಿ ಬಿಡುತ್ತಾರೆ. ಉಳಿದ ಎರಡುವರೆ ವರ್ಷ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ! ಎನ್ನುವ ಮಾತು ಆರಂಭದಿಂದಲೂ ಕೇಳಿ ಬರುತ್ತಿದೆ. ಅದರಂತೆ ಸಿಎಂ ಸ್ಥಾನಕ್ಕೇರಲು ಡಿ.ಕೆ ಶಿವಕುಮಾರ್ ಅವರು ಸಹ ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಮಾಜಿ ಸಂಸದ ಡಿಕೆ ಸುರೇಶ್ ಮಾರ್ಮಿಕವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿವಿದಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಹೊತ್ತಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ನನ್ನ ಸ್ಥಾನ ಮೊದಲಿನಿಂದಲೂ ಗಟ್ಟಿಯಾಗಿತ್ತು, ಈಗಲೂ ಗಟ್ಟಿಯಾಗಿದೆ: ಸಿಎಂ ಸಿದ್ದು
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಕೊಟ್ಟ ಮಾತು ತಪ್ಪಲ್ಲ. ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಸಿದ್ದರಾಮಯ್ಯಗೂ ಜವಾಬ್ದಾರಿ ಇದೆ. ಸಿದ್ದರಾಮಯ್ಯ ಯಾರಿಗೂ ಕೊಟ್ಟ ಮಾತಿಗೆ ತಪ್ಪಿಲ್ಲ. ಹಿಂದಿನ ಸರ್ಕಾರದಲ್ಲಿ ಕೂಡ ಮಾತಿನ ಪ್ರಕಾರವೇ ನಡೆದಿದ್ದಾರೆ. ಈಗಿನ ಸರ್ಕಾರದಲ್ಲೂ ಕೂಡ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ ಹಾಗೂ ಮುಂದೆಯೂ ಕೊಟ್ಟ ಮಾತಿನ ಪ್ರಕಾರವೇ ನಡೆದುಕೊಳ್ಳುತ್ತಾರೆ ಎಂದು ಮಾರ್ಮಿಕ ಹೇಳಿಕೆ ನೀಡಿದ್ದಾರೆ.
ಶ್ರಮಕ್ಕೆ ಫ್ರತಿಫಲ ಖಂಡಿತವಾಗಿ ಇದೆ. ಅದಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು. ಒಂದಲ್ಲ ಒಂದು ದಿನ ನಮ್ಮ ಅಣ್ಣ ಡಿ.ಕೆ.ಶಿವಕುಮಾರ್ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ ಕಾದು ನೋಡಬೇಕು. ಎಲ್ಲದಕ್ಕೂ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಉತ್ತರ ಕೊಡುತ್ತದೆ ಎಂದರು.
ಡಿ.ಕೆ.ಸುರೇಶ್ ಅವರ ಈ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ಸರ್ಕಾರ ರಚನೆ ಸಂದರ್ಭದಲ್ಲಿ 50:50 ಅಡಿ ಅಧಿಕಾರಿ ಹಂಚಿಕೆ ಒಪ್ಪಂದವಾಗಿದ್ದು ನಿಜವೇ? ಎರಡೂವರೆ ವರ್ಷದ ನಂತರ ಸಿಎಂ ಕುರ್ಚಿ ಬಿಟ್ಟು ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಕಾಂಗ್ರೆಸ್ ಹೈಕಮಾಂಡ್ ಉತ್ತರಿಸಬೇಕಿದೆ. ಅದ್ರೆ ಇಂದು ಚಾಮರಾಜನಗರದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನನ್ನ ಸಿಎಂ ಸ್ಥಾನ ಗಟ್ಟಿಯಾಗಿದೆ ಎಂದು ಹೇಳಿದ್ದಾರೆ.