ಬೆಂಗಳೂರು : ನಾನು ಸಿಎಂ ಆಗೋಕೆ ಪಕ್ಷದೊಳಗೆ ಹೋರಾಟ ಮಾಡಲ್ಲ. ಬಂಡಾಯ ಎಬ್ಬಿಸಿ ಪಕ್ಷಕ್ಕೆ ದ್ರೋಹ ಮಾಡುವವನಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೀದಿ ಹೋರಾಟಗಾರ, ಹೇಗೆ ಹೋರಾಡಬೇಕೆಂದು ನನಗೆ ಗೊತ್ತು. ನನ್ನ ಹೋರಾಟ ಅಧಿಕಾರಕ್ಕಾಗಿ ಅಲ್ಲ, ಪಕ್ಷದೊಳಗಲ್ಲ. ನನ್ನ ಹೋರಾಟ ಪಕ್ಷದ ಹೊರಗಿದೆ. ನಾನು ಮೌನವಾಗಿದ್ದೇನೆ ಎಂದು ನನ್ನ ವಿರೋಧಿಗಳು ಭಾವಿಸಿದರೆ ಅದು ಅವರ ಊಹೆ ಎಂದರು.
ಇನ್ನು ನಾನು ಏಕೆ ಬಂಡಾಯ ಮಾಡಬೇಕು? ನನಗೆ ನನ್ನ ಮೇಲೆ ವಿಶ್ವಾಸವಿದೆ, ನಾನು ಆಶಾಭಾವದಿಂದ ಬದುಕುತ್ತೇನೆ. ನನಗೆ ಸಿಗಬೇಕಾದ್ದು ಸಿಕ್ಕೇ ಸಿಗುತ್ತದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಡುವಿನ ಸಂಬಂಧ ಹಾಲು-ಜೇನಿನಂತಿದೆ ಎಂದು ಹೇಳಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಯ ವಿಷಯವಾಗಿ ನಾನು ಇದುವರೆಗೆ ಮಾತನಾಡಿಲ್ಲ. ಅದು ನನ್ನ, ಮುಖ್ಯಮಂತ್ರಿ ಮತ್ತು ಪಕ್ಷದ ಹೈಕಮಾಂಡ್ ನಡುವೆ ಇರುವ ವಿಷಯ ಎಂದರು.
ಇದನ್ನೂ ಓದಿ : ನಾನು ಬದುಕಿರೋ ವರೆಗೂ ಬಿಜೆಪಿಯೇ ನನ್ನ ಉಸಿರು, ಕರೆದ್ರೆ ಮರಳಿ ಹೋಗ್ತೀನಿ : ಈಶ್ವರಪ್ಪ
ಕೆಲವು ನಿರ್ಧಾರಗಳು ತೆಗೆದುಕೊಳ್ಳುವಾಗ ನಾನು ಭಾಗಿಯಾಗಿದ್ದೆ ಎಂದು ಹೇಳುವುದನ್ನು ಹೊರತುಪಡಿಸಿ ಬೇರೆ ಯಾವುದೇ ಹೇಳಿಕೆ ನೀಡಿಲ್ಲ. ಮುಖ್ಯಮಂತ್ರಿ ಸ್ಥಾನ ಖಾಲಿಯಾಗಲಿದೆ ಅಥವಾ ದಲಿತರಿಗೆ ಅಥವಾ ಇನ್ನೊಬ್ಬರಿಗೆ ಆ ಸ್ಥಾನ ಸಿಗಬೇಕು ಎಂದು ನಾನು ಎಂದಿಗೂ ಹೇಳಿಲ್ಲ. ಮುಖ್ಯಮಂತ್ರಿ ಸ್ಥಾನವನ್ನು ಖಾಲಿ ಮಾಡುತ್ತಿರುವುದು ಇತರರೇ ಎಂದು ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದರು. ಕೆಪಿಸಿಸಿ ಅಧ್ಯಕ್ಷನಾಗಿ ಶಿಸ್ತನ್ನು ಕಾಪಾಡುವುದು ಮತ್ತು ಪಕ್ಷದ ಪ್ರತಿಷ್ಠೆಗೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳುವುದು ನನ್ನ ಹೊಣೆಗಾರಿಕೆ ಎಂದರು.
ನನ್ನ ಹುದ್ದೆಗೆ ಅನ್ಯಾಯವಾಗುವಂತಹ ಕೆಲಸ ನಾನು ಮಾಡಬಾರದು. ನಾನು ತಪ್ಪು ಮಾಡಿದ್ದೇನೆ ಎಂದು ಇತರರು ಬೆರಳು ತೋರಿಸುವಂತಾಗಬಾರದು. ನಾವು ಕಟ್ಟಿಕೊಂಡು ಬೆಳೆಸಿದ ಪಕ್ಷ ಇದು. ಸ್ವಾರ್ಥಕ್ಕಾಗಿ ನಾನು ಪಕ್ಷಕ್ಕೆ ತೊಂದರೆ ಕೊಡಲ್ಲ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ದೆಹಲಿಯಲ್ಲಿ ನಾಯಕತ್ವದ ವಿಚಾರ ಚರ್ಚಿಸಿದ್ದಾರೆಯೇ ಎಂದು ಕೇಳಿದಾಗ ಈ ಬಗ್ಗೆ ನನಗೆ ತಿಳಿದಿಲ್ಲ. ನಾನು ಅವರೊಂದಿಗೆ ಮಾತನಾಡಿಲ್ಲ, ಎಂದು ಹೇಳಿದರು.