ಬೆಂಗಳೂರು : ರೇಸ್ ಕೋರ್ಸ್ ನ್ನು ಬೆಂಗಳೂರಿನಿಂದ ಕುಣಿಗಲ್ಗೆ ಸ್ಥಳಾಂತರ ಮಾಡುವುದರಿಂದ 2 ಸಾವಿರ ಉದ್ಯೋಗ ಸೃಷ್ಟಿ ಆಗಲಿದೆ. ಹಾಗಾಗಿ ಇದಕ್ಕೆ ವಿರೋಧ ಏಕೆ? ಚಟ ಇದ್ದವರು ಆಡ್ತಾರೆ ಬಿಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಮಾಗಡಿಯಲ್ಲಿ ಮಾತನಾಡಿದ ಡಿಕೆಶಿ, ಮೈಸೂರು ಮಹಾರಾಜರ ಕಾಲದಿಂದಲೂ ಕುಣಿಗಲ್ನಲ್ಲಿ ಕುದುರೆ ಸಾಕಲಾಗುತ್ತಿದೆ. ಬೆಂಗಳೂರು ರೇಸ್ ಕೋರ್ಸ್ ಅನ್ನು ಇಲ್ಲಿಗೆ ಸ್ಥಳಾಂತರಿಸುತ್ತೇವೆ ಎಂದರೆ ಇದಕ್ಕೆ ವಿರೋಧ ಮಾಡುತ್ತೀರಾ? ಇದರಿಂದ ಸುಮಾರು 2 ಸಾವಿರ ಜನರಿಗೆ ಕೆಲಸ ಸಿಗುತ್ತದೆ. ನಾವು ಕುಣಿಗಲ್ ಜನರಿಗೆ ರೇಸ್ ಆಡಿ ಎಂದು ಹೇಳಿಲ್ಲ. ರೇಸ್ ಕೋರ್ಸ್ ಬೆಂಗಳೂರಿನಲ್ಲಿದೆ ಎಂದು ಬೆಂಗಳೂರಿನ ಎಲ್ಲರೂ ರೇಸ್ ಆಡುತ್ತಿದ್ದಾರಾ? ನೀನು ಕೂಡ ರೇಸ್ ಆಡಬೇಡ ಎಂದು ವಿರೋಧಿ ಬಣಕ್ಕೆ ತಿರುಗೇಟು ನೀಡಿದರು.
ನೀನು ಎಲ್ಲಿ ರೇಸ್ ಆಡ್ತೀಯ ಅನ್ನೊದು ಗೊತ್ತಿದೆ..!
ನೀನು ಎಲ್ಲಿ ಆಡುತ್ತಿದ್ದೀಯಾ, ಆ ಜಾಗ ಯಾವುದು ಎಂದು ನನಗೆ ಗೊತ್ತು. ಕುಣಿಗಲ್ ಗೆ ಹೆಸರು ಬರುತ್ತದೆ. ಬೇರೆ ಊರುಗಳಿಂದ ಬಂದವರು, ಅದರ ಚಟ ಇರುವವರು ರೇಸ್ ಆಡುತ್ತಾರೆ. ಚಟ ಇರುವವರು ವೈನ್ ಶಾಪಿಗೆ ಹೋಗುವುದಿಲ್ಲವೇ? ಚಟ ಇರುವವರು ಗೋವಾದಲ್ಲಿ ಕ್ಯಾಸಿನೋಗೆ ಹೋಗುವುದಿಲ್ಲವೇ? ರಾಮನಗರದವರು ಹೋಗಿ ಕ್ಯಾಸಿನೋ ಆಡುತ್ತಿರುವ ಫೋಟೋ ನೋಡಿದ್ದೇನೆ. ದೊಡ್ಡವರು ಆಡಿದ್ದಾರೋ, ಚಿಕ್ಕವರು ಆಡಿದ್ದಾರೋ ಎಂದು ನಾನು ಹೇಳುವುದಿಲ್ಲ. ಹೆಸರು ಹೇಳಿದರೆ ಪತ್ರಿಕೆಯವರು ಅದನ್ನೇ ಬರೆಯುತ್ತಾರೆ ಎಂದು ಕಿಡಿಕಾರಿದ್ರು.
ಇದನ್ನೂ ಓದಿ : ನಾನು ಸಿಎಂ ಆಗೋಕೆ ಪಕ್ಷದೊಳಗೆ ಬಂಡಾಯ ಎಬ್ಬಿಸಿ ಪಕ್ಷದ್ರೋಹ ಮಾಡಲ್ಲ : ಡಿಕೆಶಿ
ಇನ್ನು ನಾವು ಶಾಶ್ವತವಲ್ಲ. ನಮ್ಮ ಕೆಲಸಗಳು ಮಾತ್ರ ಶಾಶ್ವತ. ಕೆಂಪೇಗೌಡರನ್ನು ನಾವು ನೆನೆಯುವುದು ಶಾಶ್ವತ. ಬಾಲಕೃಷ್ಣ ಅವರು ಚಕ್ರಬಾವಿಯಲ್ಲಿ ಒಂದು ಶಾಲೆ ಬೇಕು ಎಂದು ಕೇಳಿದರು. ನಾನು ಚಿಕ್ಕವನಾಗಿದ್ದಾಗ ಚಕ್ರಬಾವಿಗೆ ಬರುತ್ತಿದ್ದೆ. ಈ ಮನವಿ ಬಗ್ಗೆ ನಾನು, ಸುರೇಶ್ ಅವರೆಲ್ಲಾ ಸೇರಿ ಚರ್ಚೆ ಮಾಡಿ ಸಾಕ್ಷಿಗುಡ್ಡೆ ಬಿಟ್ಟು ಹೋಗುತ್ತೇವೆ. ನಾನು ಇಂಧನ ಸಚಿವನಾಗಿದ್ದಾಗ ಎಷ್ಟು ಸ್ಟೇಷನ್ ಮಾಡಿದ್ದೇನೆ, ಹೆಚ್ ವಿಡಿಎಶ್ ಯೋಜನೆಯಲ್ಲಿ ನಾನು ಕೊಟ್ಟಿರುವ ಟ್ರಾನ್ಸ್ಫಾರ್ಮರ್ ಗಳು, ಈ ಕೆರೆ ತುಂಬಿಸುವ ಯೋಜನೆ ಸೇರಿದಂತೆ ಮಾಗಡಿ ಕ್ಷೇತ್ರದ ನೀರಾವರಿ ಯೋಜನೆಗೆ 1 ಸಾವಿರ ಕೋಟಿ ಅನುದಾನ ನೀಡಿದ್ದೇನೆ ಎಂದರು.
ಕುಣಿಗಲ್ ಕ್ಷೇತ್ರದ ನೀರಾವರಿ ಯೋಜನೆಗಳಿಗೆ 1 ಸಾವಿರ ಕೋಟಿ, ರಾಮನಗರ ಹಾಗೂ ಕನಕಪುರ ಕ್ಷೇತ್ರಗಳಿಗೆ 1 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಈ ಬಗ್ಗೆ ಬಿಜೆಪಿಯವರು ಉತ್ತರ ನೀಡಬೇಕು. ನಿಮ್ಮ ಕಾಲದಲ್ಲಿ ನೀವು ಏನು ಮಾಡಿದ್ದೀರಿ ಎಂದು ಹೇಳಿ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಆಕ್ರೋಶ ಹೊರಹಾಕಿದ್ರು.