ಗ್ಯಾರಂಟಿಗಳನ್ನ ಕೊಡೋಕು ಮುಂಚೆಯೇ ಯೋಚನೆ ಮಾಡಬೇಕಿತ್ತು : ಡಿ.ಕೆ.ಸುರೇಶ್

ಬೆಂಗಳೂರು : ಸರ್ಕಾರಕ್ಕೆ ಹೊರೆಯಾದ್ರೂ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನ ಈಡೇರಿಸಬೇಕು. ಇಲ್ಲದಿದ್ರೆ ಗ್ಯಾರಂಟಿಗಳನ್ನ ಕೊಡುವ ಮುಂಚಿತವಾಗಿ, ಮಾತು ಕೊಡುವುದಕ್ಕಿಂತ ಮುಂಚೆಯೇ ಯೋಚನೆ ಮಾಡಬೇಕಾಗಿತ್ತು ಎಂದು ಮಾಜಿ ಸಂಸದ ಡಿಕೆ ಸುರೇಶ್‌ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್‌ ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆ ಆಗುತ್ತಿದೆ ಎಂದು ಹೇಳಿದ್ದರು. ಈ ಸಂಬಂಧ ಇಂದು ನಗರದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ನಮ್ಮ ವಾಗ್ದಾನ. ಕರ್ನಾಟಕದ ಜನರಿಗೆ ಕೊಟ್ಟ ವಾಗ್ದಾನ, ನಮ್ಮ ಸರ್ಕಾರ ಆ ವಾಗ್ದಾನದಂತೆ ನಡೆಯಬೇಕು.

ಯಾರು ಚುನಾವಣೆ ಎದುರಿಸಿದ್ರೋ ಅವರೆಲ್ಲ ಜನರಿಗೆ ನಂಬಿಕೆ ಕೊಟ್ಟಿದ್ದಾರೆ. ಹೊರೆಯಾದರೂ ಆಗಲಿ, ಏನಾದರೂ ಆಗ್ಲಿ ಕೊಟ್ಟ ಮಾತನ್ನ ಈಡೇರಿಸಲೇಬೇಕು. ಹೊರೆ ಆಗುತ್ತೆ ಅನ್ನೋದಾದ್ರೆ ಗ್ಯಾರಂಟಿ ಬಗ್ಗೆ ಹೇಳುವ ಮುನ್ನ, ಮಾತು ಕೊಡೋದಕ್ಕಿಂತ ಮುಂಚಿತವಾಗಿ ಚಿಂತನೆ ಮಾಡಬೇಕಾಗಿತ್ತು. ಈಗ ಮಾತು ಕೊಟ್ಟಾಗಿದೆ, ಅದರಂತೆ ನಡೆದುಕೊಳ್ಳಬೇಕು. 5 ವರ್ಷಗಳ ಕಾಲ ಏನೇ ಕಷ್ಟ ಆದ್ರೂ ಆ ಗ್ಯಾರಂಟಿಗಳನ್ನ ರಾಜ್ಯದ ಜನರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಸಿರಿವಂತರು ಗ್ಯಾರಂಟಿ ತೆಗೆದುಕೊಳ್ತಿದ್ರೆ ಅದು ತಪ್ಪು ಎಂದು ಆಕ್ಷೇಪಿಸಿದರು. ಗ್ಯಾರಂಟಿ ಯೋಜನೆ ಯಾರು ಅಸಹಾಯಕರು, ಜೀವನ ನಡೆಸಲು ಕಷ್ಟವಿದೆ, ಯಾರು ಬದುಕಲ್ಲಿ ಹೋರಾಟ ಮಾಡ್ತಿದ್ದಾರೆ, ಅಂಥವರಿಗೆ ಆ ಯೋಜನೆಗಳು ಇರುವಂಥದ್ದು. ಸಿರಿವಂತರು ತೆಗೆದುಕೊಳ್ತಿದ್ರೆ ತಪ್ಪು ಎಂದು ಕಿವಿಮಾತು ಹೇಳಿದ್ರು

ನಮ್ಮಣ್ಣ ಹಣೆಯಲ್ಲಿ ಬರೆದಿದ್ರೆ ಸಿಎಂ ಆಗ್ತಾರೆ..! ಹಣೆ ಬರಹದಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ. ಹಣೆಬರಹ ಇಲ್ಲ ಎಂದರೆ ಯಾರೂ ಏನೂ ಮಾಡಲು ಆಗುವುದಿಲ್ಲ. ನೀವು ಶಸ್ತ್ರತ್ಯಾಗ ಮಾಡಿದ್ದೀರಾ ಎಂದು ಕೇಳಿದಾಗ, ತ್ಯಾಗ ಮಾಡಲು ಶಸ್ತ್ರ ಇರಬೇಕಲ್ಲವೇ? ಶಸ್ತ್ರವೇ ಇಲ್ಲವಲ್ಲ. ಶಸ್ತ್ರ ಇದೆ ಎಂದು ನಾನು ಯಾವಾಗ ಹೇಳಿದ್ದೆ. ಶಸ್ತ್ರವೇ ಇಲ್ಲದಿದ್ದಾಗ ಶಸ್ತ್ರತ್ಯಾಗದ ಪ್ರಶ್ನೆಯೇ ಬಾರದು ಎಂದು ಕೇಳಿದರು.

ತಾಳ್ಮೆಯ ಅಸ್ತ್ರ ಇದೆ ಎಂದಿದ್ದೀರಿ ಎಂದಾಗ, ಈಗಲೂ ತಾಳ್ಮೆ ಇರಲಿ ಎಂದು ಹೇಳುತ್ತಿದ್ದೇನೆ‌ಎಂದರು. ಶಸ್ತ್ರ, ತಂತ್ರ, ಯುದ್ಧ ಇಲ್ಲದೇ ಬಗೆಹರಿಯುವುದೇ ಎಂದಾಗ, ಇದು ರಾಜಕಾರಣ. ಇಲ್ಲಿ ಶಸ್ತ್ರ ಹಾಗೂ ಅಸ್ತ್ರ ಬೇಕಾಗಿಲ್ಲ ಎಂದರು. ಶಾಸಕರು ದೆಹಲಿಗೆ ತೆರಳಿ ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ನಾಯಕರನ್ನು ಕೇಳುವ ಬಗ್ಗೆ ಪ್ರಶ್ನಿಸಿದಾಗ, ಶಾಸಕರು ದೆಹಲಿಗೆ ಹೋಗುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಶಾಸಕರನ್ನೇ ಕೇಳಿ” ಎಂದರು.

ಭೋಜನಕೂಟ ಸೇರಿದ ಶಾಸಕರು ನಾಯಕತ್ವದ ವಿಚಾರದಲ್ಲಿ ಸ್ಪಷ್ಟನೆ ಕೇಳಿದ್ದಾರೆ ಎಂದಾಗ, ನಾನು ಊರಲ್ಲಿ ಇರಲಿಲ್ಲ. ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಅವರು ಯಾವ ತೀರ್ಮಾನ ಕೈಗೊಂಡಿದ್ದಾರೆ, ಯಾವ ಹೇಳಿಕೆ ಕೊಟ್ಟಿದ್ದಾರೆ ಎಂಬುದೂ ಗೊತ್ತಿಲ್ಲ. ಇದು ಅವರ ವೈಯಕ್ತಿಕ ವಿಚಾರ. ಪಕ್ಷ ಅದನ್ನು ಗಮನಿಸಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *