ಪವರ್ ಶೇರಿಂಗ್; ಡಿಕೆ ಬ್ರದರ್ಸ್ ತಲೆಮೇಲೆ ಕೈ ಇಟ್ಟು ಸಿದ್ದರಾಮಯ್ಯ ಆಣೆ ಪ್ರಮಾಣ ಮಾಡಿದ್ರು

ಬೆಂಗಳೂರು : ​ರಾಜ್ಯ ಕಾಂಗ್ರೆಸ್‌ನ ಆಡಳಿತದಲ್ಲಿ ಸಿಎಂ ಬದಲಾವಣೆ ಚರ್ಚೆ ಅಂತಿಮ ಹಂತ ತಲುಪಿದೆ. ಈ ಬಗ್ಗೆ ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಿಶ್ವನಾಥ್, ಡಿ.ಕೆ.ಶಿವಕುಮಾರ್ ಪರ ಬ್ಯಾಟ್ ಬೀಸಿದ್ದು, ಸಿದ್ದರಾಮಯ್ಯ ಅವರು ವಚನಭ್ರಷ್ಟರಾಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಹೈಕಮಾಂಡ್ ಮಧ್ಯಸ್ಥಿಕೆಯಲ್ಲಿ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ತಲೆಯ ಮೇಲೆ ಕೈ ಇಟ್ಟು ಅಧಿಕಾರ ಹಂಚಿಕೆ ಕುರಿತು ಆಣೆ ಪ್ರಮಾಣ ಮಾಡಿದ್ದಾರೆ. ಈ ಮಹತ್ವದ ಸಂದರ್ಭದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಉಪಸ್ಥಿತರಿದ್ದರು ಎಂದು ಹೆಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ‘ಸಿದ್ದರಾಮಯ್ಯ ದೊಡ್ಡವರು, ಅವರು ಹೇಳಿದ್ಮೇಲೆ ಚಿಕ್ಕವರಾದ ನಾವು ನಮ್ರತೆಯಿಂದ ಇರ್ಬೇಕು’

​ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿಕೆ ಶಿವಕುಮಾರ್ ಅವರ ಪಾತ್ರ ದೊಡ್ಡದಿದೆ. ಪಕ್ಷಕ್ಕೆ 140 ಸ್ಥಾನಗಳನ್ನು ತಂದುಕೊಡಲು ಡಿಕೆಶಿ ಶ್ರಮಿಸಿದ್ದಾರೆ. ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ವಚನ ಭ್ರಷ್ಟರಾಗಬಾರದು. ರಾಜ್ಯದಲ್ಲಿ ವಚನಭ್ರಷ್ಟರಾದವರು ಯಾರೂ ಬದುಕುಳಿದಿಲ್ಲ.

ಪುಣ್ಯಕೋಟಿ ಕಥೆಯನ್ನು ನಂಬುವ ಜನ ನಮ್ಮವರು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ, ಯಡಿಯೂರಪ್ಪ ಅವರಿಗೆ ವಚನ ನೀಡಿದ ಕುಮಾರಸ್ವಾಮಿ ಅವರ ಕಥೆ ಏನಾಯಿತು? ವಚನಭ್ರಷ್ಟ ಮಾಡಿದ ಯಾರೂ ಉದ್ದಾರವಾಗಿಲ್ಲ ಎಮದು ಎಚ್ಚರಿಕೆ ನೀಡಿದ್ರು.

ಇನ್ನು ರಾಜ್ಯದಲ್ಲಿ ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಎಐಸಿಸಿ ಮೌನವಹಿಸಿರುವುದು ಸರಿಯಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಕ್ಷಣ ಮಧ್ಯಪ್ರವೇಶ ಮಾಡಬೇಕು. ಕರ್ನಾಟಕದಲ್ಲಿ ನಡೆಯುತ್ತಿರುವ ಈ ರಾಜಕೀಯ ಜನರ ಅವಕೃಪೆಗೆ ಪಾತ್ರವಾಗಿದೆ. ಶಾಸಕರು ಮತ್ತು ಸಚಿವರಿಗೆ ಮೂರು ಕಾಸಿನ ಮರ್ಯಾದೆಯೂ ಇಲ್ಲದಂತಾಗಿದೆ. ಇದು ಸಂವಿಧಾನ ಮತ್ತು ಜನತಂತ್ರವನ್ನು ಕೊಲ್ಲುವ ಕೆಲಸ ಎಂದು ಕಿಡಿಕಾರಿದರು.

​ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಎಲ್ಲವನ್ನೂ ನೀಡಿದೆ. ಪಕ್ಷಕ್ಕೆ ಬಂದ ತಕ್ಷಣವೇ ಅವರಿಗೆ ವಿರೋಧ ಪಕ್ಷದ ಸ್ಥಾನವನ್ನು ಬಿಟ್ಟುಕೊಟ್ಟರು. ಎರಡು ಬಾರಿ ಮುಖ್ಯಮಂತ್ರಿ ಸ್ಥಾನ ನೀಡಿತು. ಅಂತಹ ಕಾಂಗ್ರೆಸ್ ಪಕ್ಷವನ್ನು ಅವರು ನಾಶ ಮಾಡುತ್ತಿದ್ದಾರೆ. ಎಲ್ಲವನ್ನೂ ಕೊಟ್ಟ ಪಕ್ಷಕ್ಕೆ ಬಾಗಿಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಒಬ್ಬ ಬೊಗಳೆ ದಾಸ ತೀವ್ರವಾಗಿ ಟೀಕಿಸಿದರು.

Leave a Reply

Your email address will not be published. Required fields are marked *