ಗದಗ : ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ₹11 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿದ್ದು, ಮುಂಗಡವಾಗಿ ₹5 ಲಕ್ಷ ಕಮಿಷನ್ ಪಡೆಯುವಾಗ ಶಾಸಕ ಸೇರಿದಂತೆ ಪಿಎಗಳಾದ ಮಂಜುನಾಥ್ ಮತ್ತು ಗುರು ಸಿಕ್ಕಿಬಿದ್ದಿದ್ದು, ಮೂವರನ್ನು ವಶಕ್ಕೆ ಪಡೆದು ಲೋಕಯುಕ್ತ ಪೊಲೀಸರಿಂದ ವಿಚಾರಣೆ ನಡೆಸ್ತಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ಕ್ಲಾಸ್ 1 ಗುತ್ತಿಗೆದಾರ ವಿಜಯ್ಗೆ ಲಂಚ ನೀಡಲು ಒತ್ತಾಯಿಸಲಾಗಿದೆ. ರಸ್ತೆ ಬದಿ ತಡೆಗೋಡೆ ನಿರ್ಮಾಣದ ಕಾಮಗಾರಿ ವಹಿಸಲು ₹11 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಡಲಾಗಿದೆ. ಆದರೆ ಮುಂಗಡವಾಗಿ ₹5 ಪಡೆಯುತ್ತಿದ್ದಾಗ ಶಾಸಕ ಚಂದ್ರು ಲಮಾಣಿ ಮತ್ತು ಇಬ್ಬರು ಪಿಎಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಚಂದ್ರು ಲಮಾಣಿಗೆ ಸೇರಿದ ಬಾಲಾಜಿ ಆಸ್ಪತ್ರೆ ಮೇಲೂ ಲೋಕಾಯುಕ್ತ ದಾಳಿ ಮಾಡಿ ಪರಿಶೀಲನೆ ಮಾಡಿದೆ. ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ಸದ್ಯ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.