ಮುಸ್ಲೀಮರು, ಕ್ರಿಶ್ಚಿಯನ್ನರು ನನ್ನ ಸೋಲಿಸಲಿಲ್ಲ, ನಮ್ಮ ಹಿಂದೂಗಳೇ ಸೋಲಿಸಿದ್ದು : ಅನಂತ್ ಕುಮಾರ್ ಹೆಗ್ಡೆ ಗುಡುಗು

ದಕ್ಷಿಣ ಕನ್ನಡ : ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ ಬಳಿಕ ಸಾರ್ವಜನಿಕವಾಗಿ ಮೌನಕ್ಕೆ ಶರಣಾಗಿದ್ದ ಮಾಜಿ ಸಂಸದ ಅನಂತಕುಮಾರ್ ಹೆಗಡೆ, ಇದೀಗ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಗರದಲ್ಲಿ‌ ನಡೆದ ಹಳೆ ಬಸ್ ಹಿಂದೂ ಸಂಗಮ ಸಮಾವೇಶದಲ್ಲಿ ಭಾಗವಹಿಸಿ ಅಬ್ಬರದ ಭಾಷಣ ಮಾಡಿದ್ದಾರೆ.

ಹಿಂದೂ ಧರ್ಮದಲ್ಲಿ 90% ಋಷಿಗಳು ಬ್ರಾಹ್ಮಣರಲ್ಲ. ವಾಲ್ಮೀಕಿ, ವಿಶ್ವಾಮಿತ್ರ ಬ್ರಾಹ್ಮಣರಲ್ಲ. ಈ ದೇಶದಲ್ಲಿ ಜಾತಿಗೆ ಎಂದಿಗೂ ಬೆಲೆಯಿರಲಿಲ್ಲ, ಯೋಗ್ಯತೆಗೆ ಮಾತ್ರ ಬೆಲೆಯಿತ್ತು. ಇಂದು ಜಾತಿಗೆ ಬೆಲೆ ಕೊಟ್ಟಿದ್ದು ನಮ್ಮಂತಹ ಬುದ್ಧಿವಂತರು. ಇತಿಹಾಸ ಓದಿದರೆ ಸತ್ಯ ತಿಳಿಯುತ್ತದೆ ಎಂದು ಅವರು ಹೇಳಿದರು.

ಜಾತ್ಯತೀತತೆ ಎಂದರೆ ಅದು ಹಿಂದುತ್ವ. ಬೇರೆ ರಾಷ್ಟ್ರಗಳಿಂದ ಬಂದವರಿಗೆ ಮಸೀದಿ, ಚರ್ಚ್ ಕಟ್ಟಲು ಅವಕಾಶ ನೀಡಿದ್ದೇವೆ ಎಂದರೆ ನಮಗಿಂತ ದೊಡ್ಡ ಜಾತ್ಯತೀತರು ಯಾರಿದ್ದಾರೆ? ತಾಕತ್ತಿದ್ದರೆ ಬಾಂಗ್ಲಾದೇಶಕ್ಕೆ ಹೋಗಿ ಜಾತ್ಯತೀತತೆಯ ಪಾಠ ಮಾಡಿ” ಎಂದು ಸವಾಲು ಹಾಕಿದರು.

ನಮ್ಮನ್ನು ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಸೋಲಿಸಿಲ್ಲ. ಹಿಂದೂಗಳನ್ನು ಸೋಲಿಸಿದ್ದು ನಮ್ಮವರೇ ಆದ ಜಯಚಂದ ಮತ್ತು ಮಲ್ಲಪ್ಪ ಶೆಟ್ಟಿಯಂತಹ ದ್ರೋಹಿಗಳು. ನಾವು ಒಂದಾಗದಿದ್ದರೆ ನಮ್ಮ ಪರಿಸ್ಥಿತಿ ‘ಗೋವಿಂದ ಗೋವಿಂದ’ ಆಗಲಿದೆ” ಎಂದು ಎಚ್ಚರಿಸಿದರು. ಆರ್.ಎಸ್.ಎಸ್ ಮುಗಿಸುತ್ತೇವೆ ಎನ್ನುವವರು ಭ್ರಮೆಯಲ್ಲಿದ್ದಾರೆ. ಹುಲಿ-ಸಿಂಹವನ್ನು ಯಾರೂ ದೇವರಿಗೆ ಬಲಿ ಕೊಡಲ್ಲ, ಕುರಿಯನ್ನಷ್ಟೇ ಬಲಿ ಕೊಡೋದು. ನಮ್ಮ ಸಂಘಟನೆಯನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ಎಂದು ಗುಡುಗಿದರು.

ಇಂದು ಆಫ್ರಿಕಾದಲ್ಲಿ ನಮಗಿಂತ ಸುಂದರವಾಗಿ ಗಣೇಶ ಹಬ್ಬ ಆಚರಿಸುತ್ತಾರೆ. ಚೀನಾದ ಗ್ರಾಮೀಣ ಪ್ರದೇಶಗಳಲ್ಲಿ ಭಾರತೀಯರಿಗೆ ಅಪಾರ ಗೌರವವಿದೆ. ಜಗತ್ತು ನಮ್ಮತ್ತ ನೋಡುತ್ತಿದೆ, ನಾವಿಂದು ಎದ್ದು ನಿಲ್ಲಬೇಕಿದೆ” ಎಂದರು. ಸುಮಾರು 3,000ಕ್ಕೂ ಹೆಚ್ಚು ಜನರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಿಕ್ಷಣ ಕೇವಲ ದುಡ್ಡು ಮಾಡುವುದಕ್ಕಷ್ಟೇ ಎಂಬಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಸಂಸ್ಕಾರಯುತ ಬದುಕಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.

Leave a Reply

Your email address will not be published. Required fields are marked *