142 ಕೋಟಿ ಜನ ಮನಸ್ಸು ಮಾಡಿದ್ರೆ ನಾಳೆಯೇ ಹಿಂದೂ ರಾಷ್ಟ್ರವಾಗುತ್ತೆ : ಮೋಹನ್ ಭಾಗವತ್

ಬೆಂಗಳೂರು : ಮನಸ್ಸು ಮಾಡಿದರೆ ಒಂದೇ ದಿನಗಳಲ್ಲಿ ಭೂಮಿಯಿಂದ ಚಂದ್ರನಲ್ಲಿಗೆ ಹೋಗಬಹುದು. ಅದೇ ರೀತಿ ಭಾರತದ 142 ಕೋಟಿ ಜನ ಮನಸ್ಸು ಮಾಡಿದರೆ ನಾಳೆ ಬೆಳಗ್ಗೆಯೇ ಹಿಂದೂ ರಾಷ್ಟ್ರ ಆಗಬಹುದು. ಯಾರೂ ಸಹ ಎಷ್ಟು ದಿನ ಬೇಕು ಅಂತ ಹೇಳಿ ಕೊಡುವುದಿಲ್ಲ, ಮುಂದೊಂದು ದಿನ ಹಿಂದೂ ರಾಷ್ಟ್ರ ಆಗಿಯೇ ಆಗುತ್ತದೆ ಈ ಪ್ರಯತ್ನದಲ್ಲಿ ನಾವು ಇದ್ದೇವೆ ಎಂದು ಆರ್​​​ಎಸ್​​ಎಸ್​​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಆರ್​ಎಸ್ಎಸ್ ಶತಮಾನೋತ್ಸವ ಹಿನ್ನೆಲೆ ನಗರದ ಹೊಸಕೆರೆಹಳ್ಳಿಯ PES ಕಾಲೇಜು ಸಭಾಂಗಣದಲ್ಲಿ ನಡೆದ ನವ ಕ್ಷಿತೀಜ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಬಲಿಷ್ಠ ಭಾರತ ಕಟ್ಟುವುದೇ ಗುರಿ. ಅದಕ್ಕಾಗಿ ಹಿಂದೂ ಸಮಾಜವನ್ನು ತಯಾರು ಮಾಡುತ್ತಿದ್ದೇವೆ, ಹಿಂದೂ ಸಮಾಜ ಕಟ್ಟುವುದೇ ಗುರಿ ಎಂದು ಹೇಳಿದರು.

ಇನ್ನು ಯಾವುದೇ ಧರ್ಮ, ಜಾತಿಯವರಿರಲಿ, ಭಾರತ ಮಾತೆಯ ಪುತ್ರರಾಗಿ, ಹಿಂದೂಗಳಾಗಿ ಕೆಲಸ ಮಾಡಬೇಕು. ಎಲ್ಲಾ ಧರ್ಮದವರಿಗೂ ಸಂಘದಲ್ಲಿ ಅವಕಾಶವಿದೆ. ಸಂಘದಿಂದ ಯಾರಿಗೂ ಯಾವುದೇ ನಿರೀಕ್ಷೆ ಇರಬಾರದು. ಜಾತಿ, ಧರ್ಮಗಳ ಹೆಸರಿನಲ್ಲಿ ಸಂಘ ಏನೂ ಮಾಡುವುದಿಲ್ಲ. ಹಿಂದೂಸ್ಥಾನಿ, ಹಿಂದೂ ರಾಷ್ಟ್ರ ಸಂಘದ ಈ ನಿಲುವು ಎಂದಿಗೂ ಬದಲಾಗುವುದಿಲ್ಲ ಎಂದರು.

ಇದನ್ನೂ ಓದಿ : ಜೈಲಿನಲ್ಲಿ ಉಗ್ರರಿಗೆ, ರೌಡಿಗಳಿಗೆ ಕೈದಿಗಳಿಗೆ ರಾಜಾತಿಥ್ಯ: ಅಧಿಕಾರಿಗಳ ವಿರುದ್ಧ ಪರಂ​-ಗರಂ

ಸ್ವಯಂ ಸೇವಕರಿಗೆ ಎಲ್ಲಾ ರಾಜಕೀಯ ಪಕ್ಷಗಳ ಬಾಗಿಲು ಬಂದ್ ಆಗಿತ್ತು, ಹಾಗಾಗಿ ಬಿಜೆಪಿಗೆ ಹೋದರು. ಬೇರೆ ಪಕ್ಷಗಳಲ್ಲಿ ಸ್ವಯಂ ಸೇವಕರು ಯಾಕಿಲ್ಲ ಎಂದು ಆ ಪಕ್ಷದವರನ್ನೇ ಕೇಳಿ. ನಾವು ರಾಷ್ಟ್ರ ನೀತಿಯನ್ನು ಬೆಂಬಲಿಸುತ್ತೇವೆ ಹೊರತು ರಾಜನೀತಿಯನ್ನಲ್ಲ.

ದೇಶದ ಗಡಿ ಬಂದ್ ಮಾಡಿದ್ದಕ್ಕೆ ಮಣಿಪುರದಲ್ಲಿ ಗಲಾಟೆ ಸೃಷ್ಟಿಯಾಯಿತು. ಆದರೆ ನಮ್ಮಲ್ಲಿನ ಕೆಲವರು ಅದನ್ನ ಬೇರೆ ರೀತಿಯಲ್ಲಿ ಬಿಂಬಿಸಿದರು. ಭಾರತದ ಗಡಿ ನಿರ್ಮಾಣ ಅಸ್ವಾಭಾವಿಕವಾಗಿದೆ. ಬಾಂಗ್ಲಾದಲ್ಲಿ ಅಡುಗೆಮನೆಯಾದರೆ, ಭಾರತದಲ್ಲಿ ಬಾತ್ ರೂಮ್ ಆಗಿದೆ. ಪೆನ್ ತೆಗೆದುಕೊಂಡು ಗೆರೆ ಎಳೆದಿದ್ದೇನೆ ಎಂದು ಗಡಿ ರೇಖೆ ಬರೆದ ವ್ಯಕ್ತಿಯೇ ಹೇಳಿದ್ದಾರೆ ಎಂದರು.

ರಾಜಕಾರಣಿಗಳು ಜಾತಿ ಜಾತಿಗಳ ವಿಭಜನೆ ಮಾಡುತ್ತಾರೆ. ನಾವೆಲ್ಲಾ ಒಂದೇ ಎಂದು ನೀವ್ಯಾಕೆ ಹೇಳಲ್ಲ? ಭಾರತೀಯ ನಾಗರಿಕರೆಲ್ಲರೂ ಇದನ್ನು ವಿರೋಧಿಸಬೇಕು. ಒಂದೇ ಶತಮಾನದಲ್ಲಿ ಮೂರು ಖಂಡ ಮತಾಂತರವಾಗಿದೆ, ಆದರೆ ಭಾರತ ಹಾಗಾಗಿಲ್ಲ.

500 ವರ್ಷ ನಮ್ಮನ್ನು ಆಳಿದರೂ, ಮತಾಂತರಿಗಳು ಇಂದಿಗೂ ಮೈನಾರಿಟಿ ಆಗಿದ್ದಾರೆ. ಒಂದು ಜಾತಿ ಒಂದು ಕೆಲಸ ಎಂಬ ಪದ್ದತಿ ಬೆಳೆದು ಬಂದಿದೆ. ಆದರೆ ಈಗ ಯಾರು ಬೇಕಾದರೂ ಯಾವುದೇ ಕೆಲಸ ಮಾಡಬಹುದು. ಸಂಘದಲ್ಲಿ ಜಾತಿ ಉಲ್ಲೇಖ ಮಾಡಲ್ಲ, ನಮ್ಮ ಜಾತಿಯನ್ನೇ ಮರೆಯುತ್ತೇವೆ. ರಾಜಕೀಯ ಕಾರಣದಿಂದ ಜಾತಿ, ಅಸ್ಪೃಶ್ಯತೆ ಇಂದಿಗೂ ಇದೆ. ಮೀಸಲಾತಿ ಮುಂದುವರೆಯಬೇಕು. ಅಸ್ಪೃಶ್ಯತೆ, ಅಸಮಾನತೆ ಎಲ್ಲಾ ಮೊದಲು ದೂರವಾಗಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *