ಧಾರವಾಡದಲ್ಲಿ ಉಗ್ರ ಪ್ರತಿಭಟನೆ ಬೆನ್ನಲ್ಲೇ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು : ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ನಡೆಸಿದ ಬೃಹತ್ ಪ್ರತಿಭಟನೆ ಬೆನ್ನಲ್ಲೇ, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದಂತಿದೆ. ಈ ಹಿನ್ನೆಲೆಯಲ್ಲಿ ಯುವಕರ ಕಿಚ್ಚು ಜೋರಾಗುತ್ತಿದ್ದಂತೆಯೇ ಇತ್ತ ಕರ್ನಾಟಕ ಆರ್ಥಿಕ ಇಲಾಖೆ 24 ಸಾವಿ ಹುದ್ದೆಗಳ ನೇಮಕಾತಿಗೆ ಮಂಜೂರಾತಿ ನೀಡಿದೆ.

ಕರ್ನಾಟಕದ ವಿವಿಧ ಒಟ್ಟು 32 ಇಲಾಖೆಯಲ್ಲಿ 24,300 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಮಂಜೂರಾತಿ ನೀಡಿದೆ. ಎ ದರ್ಜೆಯ 542 ಹುದ್ದೆ, ಬಿ ದರ್ಜೆಯ 619 ಹುದ್ದೆ ಹಾಗೂ ಎಫ್ ಡಿ ಸಿ ದರ್ಜೆಯ 23119 ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆ ಕ್ಲಿಯರೆನ್ಸ್ ನೀಡಿದೆ. ಇದರೊಂದಿಗೆ ರಾಜ್ಯದಲ್ಲಿ ಉದ್ಯೋಗಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ನಿರುದ್ಯೋಗಿಗಳ ಮುಖದಲ್ಲಿ ಮಂದಹಾಸ ಮೂಡುವಂಥ ತೀರ್ಮಾನವನ್ನು ಸರ್ಕಾರ ತೆಗದುಕೊಂಡಿದೆ.

ರಾಜ್ಯದ ವಿವಿಧ ಇಲಾಖೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಎಲ್ಲವನ್ನೂ ಹಂತ ಹಂತವಾಗಿ ಭರ್ತಿ ಮಾಡುವುದಾಗಿ ಈ ಹಿಂದೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದರು. ಇನ್ನು ರಾಜ್ಯ ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಲಾಗಿದ್ದು, 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ಅಧಿಸೂಚನೆಗಳಿಗೆ ಇದು ಅನ್ವಯವಾಗಲಿದೆ.

ಸಿಎಂ ಸಿದ್ದರಾಮಯ್ಯರ ಪ್ರತಿಕ್ರಿಯೆ ಏನು..?
ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಕುರಿತು ಸುದೀರ್ಘ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಿಎಂ, ಪ್ರತಿಯೊಂದು ಅರ್ಜಿಯ ಹಿಂದೆ ಒಂದು ಕುಟುಂಬದ ಭರವಸೆ ಮತ್ತು ವರ್ಷಗಳ ಪರಿಶ್ರಮವಿರುತ್ತದೆ ಎಂಬುದು ನನಗೆ ತಿಳಿದಿದೆ. ಉದ್ಯೋಗಾಕಾಂಕ್ಷಿಗಳು ಅನುಭವಿಸುತ್ತಿರುವ ಆತಂಕ ಮತ್ತು ಹತಾಶೆಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನಿಮ್ಮ ಭವಿಷ್ಯ ನಮಗೆ ಅತ್ಯಂತ ಮುಖ್ಯವಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಬೃಹತ್ ಪ್ರಮಾಣದಲ್ಲಿ ಖಾಲಿ ಇರುವುದಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಸಿದ್ದರಾಮಯ್ಯ ನೇರ ವಾಗ್ದಾಳಿ ನಡೆಸಿದ್ದಾರೆ. ನಾವು ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ 2.64 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದವು. ಇದು ಹಿಂದಿನ ಸರ್ಕಾರದ ನಿಷ್ಕ್ರಿಯತೆಯ ಫಲ.

2019 ರಿಂದ 2023ರ ನಡುವೆ ನಡೆದ ನೇಮಕಾತಿ ಅಕ್ರಮಗಳು ಮತ್ತು ಭ್ರಷ್ಟಾಚಾರದ ಹಗರಣಗಳು ಇಡೀ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕುಂದಿಸಿದವು. ಈಗ ವಿರೋಧ ಪಕ್ಷದ ನಾಯಕರು ರಾಜಕೀಯ ಹಿತಾಸಕ್ತಿಗಾಗಿ ಮುಗ್ಧ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *