ಪೋಕ್ಸೋ ಕೇಸ್‌ನಲ್ಲಿ ಯಡಿಯೂರಪ್ಪಗೆ ಹೈಕೋರ್ಟ್‌ ಶಾಕ್‌! ಸಮನ್ಸ್‌ ಜಾರಿ ಎತ್ತಿ ಹಿಡಿದ ನ್ಯಾಯಾಲಯ

ಬೆಂಗಳೂರು : ಪೋಕ್ಸೋ ಕೇಸ್‌ನಲ್ಲಿ ಮತ್ತೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪಗೆ ಸಂಕಷ್ಟ ಎದುರಾಗಿದೆ. ಯಡಿಯೂರಪ್ಪ ಮತ್ತು ಇತರರ ವಿರುದ್ಧ ಕೆಳ ನ್ಯಾಯಾಲಯ ಸಮನ್ಸ್ ಜಾರಿ ಮಾಡಿರುವುದನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

ಕೆಳ ಹಂತದ ನ್ಯಾಯಾಲಯ ಆರೋಪ ನಿಗದಿಗೆ ಸಂಬಂಧಿಸಿದಂತೆ ಯಡಿಯೂರಪ್ಪನವರಿಗೆ ಸಮನ್ಸ್‌ ಜಾರಿ ಮಾಡಿತ್ತು. ಸಮನ್ಸ್‌ ಜಾರಿ ಮಾಡಿದ್ದನ್ನು ಪ್ರಶ್ನಿಸಿ ಯಡಿಯೂರಪ್ಪ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್‌ ಯಡಿಯೂರಪ್ಪ ಅರ್ಜಿಯನ್ನು ವಜಾಗೊಳಿಸಿ ಟ್ರಯಲ್‌ಗೆ ಅನುಮತಿ ನೀಡಿದೆ.

ಪ್ರಕರಣದ ಹಿನ್ನೆಲೆ ಏನು..?
ಬೆಂಗಳೂರಿನ ಡಾಲರ್ಸ್ ಕಾಲೊನಿಯ ತಮ್ಮ ನಿವಾಸದಲ್ಲಿ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಬಿ.ಎಸ್‌.ಯಡಿಯೂರಪ್ಪ ಮೇಲಿದೆ. ಸಹಾಯ ಕೇಳಿ ಬಂದಾಗ ಯಡಿಯೂರಪ್ಪನವರು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಾರ್ಚ್ 2024ರಲ್ಲಿ ಬಾಲಕಿಯ ತಾಯಿ ದೂರು ನೀಡಿದ್ದರು. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (Pocso) ಕಾಯ್ದೆಯಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಪರಿಗಣಿಸಿ ಸರ್ಕಾರವು ಸಿಐಡಿಗೆ ವರ್ಗಾವಣೆ ಮಾಡಿತ್ತು.

ಇನ್ನು ಈ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ ಮತ್ತು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪಗಳ ಮೇಲೆ ಯಡಿಯೂರಪ್ಪ ಮತ್ತು ಅವರ ಮೂವರು ಸಹಾಯಕರ ವಿರುದ್ಧ ಜೂನ್ 2024 ರಲ್ಲಿ ಸಿಐಡಿ 750 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಪ್ರಕರಣದಲ್ಲಿ ದೂರು ನೀಡಿದ್ದ ಬಾಲಕಿಯ ತಾಯಿ ಮತ್ತು ಆ ಬಾಲಕಿ ಇಬ್ಬರೂ ಈಗಾಗಲೇ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಬಾಲಕಿಯ ತಾಯಿ ಮೇ 26, 2024ರಂದು ನಿಧನರಾಗಿದ್ದರು.

Leave a Reply

Your email address will not be published. Required fields are marked *