ವ್ಯಾಪಾರಕ್ಕೆ ಮುಸ್ಲೀಂ ರಾಷ್ಟ್ರ ಬೇಕು ಆದ್ರೆ ಇಲ್ಲಿನ ಅಲ್ಪಸಂಖ್ಯಾತರು ಬೇಡ, ಬಿಜೆಪಿಗೆ ಎರೆಡೆರಡು ನಾಲಿಗೆ

ಕಲಬುರ್ಗಿ : ಭಾರತಕ್ಕೆ ಬೇಕಾದ ಶೇ. 90 ಪರ್ಸೆಂಟ್‌ನಷ್ಟು ಕೇಸರಿ ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಆಮದಾಗುತ್ತದೆ. ಹೀಗಿರುವಾಗ ಮುಸ್ಲಿಂ ದೇಶಗಳ ಜೊತೆಗಿನ ವ್ಯಾಪಾರ ಬೇಕು ಎನ್ನುವ ಬಿಜೆಪಿಯವರಿಗೆ ಇಲ್ಲಿನ ಅಲ್ಪಸಂಖ್ಯಾತರು ಎಂದರೆ ಯಾಕೆ ಆಗುವುದಿಲ್ಲ? ಬಿಜೆಪಿಯವರಿಗೆ ನಿಜವಾಗಿಯೂ ಎರಡೆರಡು ನಾಲಿಗೆ ಇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತಕ್ಕೆ ಶೇ.90 ರಷ್ಟು ಕೇಸರಿ ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಬರುತ್ತದೆ. ಕಚ್ಚಾ ತೈಲ ಮತ್ತು ಯುರಿಯಾಕ್ಕಾಗಿ ನಾವು ಅರಬ್ ರಾಷ್ಟ್ರಗಳನ್ನು ಅವಲಂಬಿಸಿದ್ದೇವೆ. ಹೀಗಿರುವಾಗ ಮುಸ್ಲಿಂ ದೇಶಗಳ ಜೊತೆಗಿನ ವ್ಯಾಪಾರ ಬೇಕು ಎನ್ನುವ ಬಿಜೆಪಿಯವರಿಗೆ ಇಲ್ಲಿನ ಅಲ್ಪಸಂಖ್ಯಾತರು ಎಂದರೆ ಯಾಕೆ ಆಗುವುದಿಲ್ಲ ಎಂದು ಪ್ರಶ್ನಿಸಿದರು.

ಇನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ ಪ್ರಿಯಾಂಕ್, ಒಂದೆಡೆ ಮುಸ್ಲಿಂ ವಿರೋಧಿ ಮಾತನಾಡುತ್ತಾ, ಇನ್ನೊಂದೆಡೆ ಇಸ್ಲಾಮಿಕ್ ರಾಷ್ಟ್ರಗಳ ಜೊತೆ ವ್ಯಾಪಾರ ಮಾಡುವ ಬಿಜೆಪಿಯ ಸಿದ್ಧಾಂತ ಹಸಿ ಸುಳ್ಳಿನಿಂದ ಕೂಡಿದೆ.

ಬಾಂಗ್ಲಾದೇಶದಿಂದ ಅಕ್ರಮ ನುಸುಳುಕೋರರು ಬರುತ್ತಿದ್ದಾರೆ ಎಂದು ಅಸ್ಸಾಂ ಸಿಎಂ ಹೇಳುತ್ತಿದ್ದಾರೆ. ಹಾಗಿದ್ದರೆ ದೇಶದ ಗಡಿಯನ್ನು ಕಾಯುತ್ತಿರುವ ಕೇಂದ್ರ ಗೃಹ ಸಚಿವರು ಕತ್ತೆ ಕಾಯುತ್ತಿದ್ದಾರೆಯೇ? ಎಂದು ವ್ಯಂಗ್ಯವಾಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ವಿಷಸರ್ಪಕ್ಕೆ ಹೋಲಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಖರ್ಗೆ ಸಮರ್ಥಿಸಿಕೊಂಡರು.

ಸಂವಿಧಾನಕ್ಕೆ ವಿರುದ್ಧವಾಗಿರುವ ಮತ್ತು ಸಮಾಜದಲ್ಲಿ ವಿಷ ಕಾರುವ ಸಿದ್ಧಾಂತಗಳನ್ನು ವಿಷಸರ್ಪ ಎನ್ನದೆ ಇನ್ನೇನು ಹೇಳಬೇಕು? ಆರ್‌ಎಸ್‌ಎಸ್‌ನವರಿಗೆ ತಾಕತ್ತಿದ್ದರೆ ನೇರವಾಗಿ ಬಂದು ದೂರು ನೀಡಲಿ, ಅದನ್ನು ಬಿಟ್ಟು ಬೇರೆಯವರಿಂದ ದೂರು ಕೊಡಿಸುವ ಅವಶ್ಯಕತೆಯೇನಿತ್ತು? ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *