ಅಧಿಕಾರ ಹಂಚಿಕೆಯ ಸೂತ್ರವೇ ರಚನೆಯಾಗಿಲ್ಲ, ನಮ್ಮ ತಂದೆಯೇ ಪೂರ್ಣಾವಧಿಯ ಸಿಎಂ

ಮೈಸೂರು : ಸಿಎಂ ಸಿದ್ದರಾಮಯ್ಯ ಅವರೇ ಪೂರ್ಣಾವಧಿಗೆ ಸಿಎಂ ಆಗಿ ಮುಂದುವರಿಯುತ್ತಾರೆ. ಯಾವುದೇ ಕಾರಣವಿಲ್ಲದೆ ನಾಯಕತ್ವ ಬದಲಾವಣೆ ಚರ್ಚೆ ತರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಪುತ್ರ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಯಾವ ಕಾರಣಗಳೂ ಇಲ್ಲ. ಅವರ ಮೇಲೆ ಯಾವ ಆರೋಪವೂ ಇಲ್ಲ. ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯೇ ಬರಬಾರದಿತ್ತು. ಆದರೂ ಕೆಲವರು ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ : ಅಂತಿಮಘಟ್ಟಕ್ಕೆ ಕುರ್ಚಿ ಕದನ, ಜಾರಕಿಹೊಳಿಗೆ ಡಬಲ್ ಆಫರ್ ಕೊಟ್ಟ ಡಿಕೆಶಿ..!

ಇನ್ನು ರಾಜ್ಯದಲ್ಲಿ ಚರ್ಚೆಯಲ್ಲಿರುವ ಅಧಿಕಾರ ಹಂಚಿಕೆ ಸೂತ್ರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯತೀಂದ್ರ, ನನಗೆ ಇರುವ ಮಾಹಿತಿ ಪ್ರಕಾರ, ಅಧಿಕಾರ ಹಂಚಿಕೆಯ ಸೂತ್ರವೇ ರಚನೆಯಾಗಿಲ್ಲ. ನಮ್ಮ ತಂದೆಯವರಾಗಲಿ ಅಥವಾ ಕೆಲ ಹಿರಿಯ ಸಚಿವರಾಗಲಿ ಈ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಅಲ್ಲಿಗೆ ಅಧಿಕಾರ ಹಂಚಿಕೆ ಮಾತುಕತೆ ನಡೆದಿಲ್ಲ ಎಂದು ಅರ್ಥ ತಾನೇ? ಎಂದು ಪ್ರಶ್ನಿಸಿದರು.

ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಹೇಳಿಲ್ಲ..!
ಹೈಕಮಾಂಡ್ ಎಲ್ಲೂ ಕೂಡ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ನನಗೆ ವಿಶ್ವಾಸ ಇದೆ, ಇನ್ನು ಎರಡುವರೆ ವರ್ಷ ನಮ್ಮ ತಂದೆಯೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದರು. ಇನ್ನು ಶಾಸಕರ ಬೆಂಬಲದ ಕುರಿತು ಮಾತನಾಡಿ, ಯಾರಿಗೆ ಎಷ್ಟು ಶಾಸಕರ ಬೆಂಬಲ ಇದೆ ಎಂಬಂತಹ ಚರ್ಚೆ ಮಾಡುವುದು ಬೇಡ. ಅದು ನಮ್ಮ ಪಕ್ಷದ ಆಂತರಿಕ ವಿಚಾರ. ಎಲ್ಲಾ ಶಾಸಕರ ಬೆಂಬಲ ನಮ್ಮ ತಂದೆಗೆ ಇದೆ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಆದಿಚುಂಚನಗಿರಿ ಮಠದ ಶಾಖಾ ಮಠಾಧೀಶರಾದ ನಂಜಾವಧೂತ ಸ್ವಾಮೀಜಿ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ನೀಡುವಂತೆ ಹೈಕಮಾಂಡ್‌ಗೆ ಆಗ್ರಹಿಸಿದ್ದ ಹೇಳಿಕೆಗೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಯಾರನ್ನು ಸಿಎಂ ಮಾಡಬೇಕು, ಯಾರನ್ನು ಮಾಡಬಾರದು ಎಂಬುದು ನಮ್ಮ ಪಕ್ಷದ ಆಂತರಿಕ ವಿಚಾರ. ಅದು ನಮ್ಮ ಶಾಸಕರಿಗೆ ಮತ್ತು ನಮ್ಮ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅದರ ಬಗ್ಗೆ ಬೇರೆಯವರ ಅಭಿಪ್ರಾಯ ಅನಗತ್ಯ. ಈ ಮೂಲಕ ಮುಖ್ಯಮಂತ್ರಿ ಕುರ್ಚಿ ವಿಷಯದಲ್ಲಿ ಮಠಾಧೀಶರ ಮಧ್ಯಪ್ರವೇಶವನ್ನು ಪರೋಕ್ಷವಾಗಿ ತಳ್ಳಿಹಾಕಿದ್ದಾರೆ.

Leave a Reply

Your email address will not be published. Required fields are marked *