ದಾವಣಗೆರೆ : ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿರುವ ಹೊತ್ತಲ್ಲೇ, ಬೈಎಲೆಕ್ಷನ್‌ಗಾಗಿ ಟಿಕೆಟ್ ಗುದ್ದಾಟ ಸಹ ಜೋರಾಗಿ ನಡೆಯುತ್ತಿದೆ. ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ನಿಧನದಿಂದ ಖಾಲಿ ಇರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್‌ಗಾಗಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ ನಡುವೆ ತಿಕ್ಕಾಟ ನಡೆಯುತ್ತಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ಕೊಡಿಸಲು ಜಮೀರ್ ಅಹ್ಮದ್ ಖಾನ್ ಲಾಬಿ ನಡೆಸುತ್ತಿದ್ದಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಈ ವಿಚಾರಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಹಿರಂಗವಾಗಿದೆ ಜಮೀರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಚಿವ ಜಮೀರ್ ಅಹ್ಮದ್ ಖಾನ್ ಅವರ ನಡೆಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಹೈಕಮಾಂಡ್ ಮಟ್ಟದಲ್ಲಿ ಈ ಬೆಳವಣಿಗೆ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮಾತನಾಡಿರುವ ಅವರು, ಅವನ್ಯಾರು ಇಲ್ಲಿ ಬಂದು ಮಾತನಾಡೋಕೆ, ನಮ್ಮ ಕ್ಷೇತ್ರಗಳಿವು. ಇವೆಲ್ಲ ಸರಿ ಇರಲ್ಲ. ಇಲ್ಲಿ ಬಂದು ಮಾತನಾಡೋಕೆ ಅವನಿಗೆ ಅಧಿಕಾರ ಕೊಟ್ಟವರು ಯಾರು? ಪಕ್ಷದ ಸಭೆ ಕರೆದಾಗ ನಾನು ಈ ಬಗ್ಗೆ ಮಾತನಾಡುತ್ತೇನೆ, ಈಗ ಮಾತನಾಡಲ್ಲ’ ಎಂದು ಏಕವಚನದಲ್ಲೇ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಖರ್ಗೆ ಜೊತೆ ಡಿಕೆಶಿ ದೆಹಲಿ ಪ್ರವಾಸ, ಅಧಿವೇಶನದ ಬಳಿಕ ನಾಯಕತ್ವ ಬದಲಾವಣೆ ಪಕ್ಕಾನಾ?
ಜನವರಿ 26ರಂದು ಎಂಎಲ್‌ಸಿ ಅಬ್ದುಲ್ ಜಬ್ಬಾರ್ ನಿವಾಸಕ್ಕೆ ಭೇಟಿ ನೀಡಿದ್ದ ಸಚಿವ ಜಮೀರ್ ಅಹ್ಮದ್, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದರು. ಈ ಬಗ್ಗೆ ಹೈಕಮಾಂಡ್ ಮತ್ತು ವರಿಷ್ಠರಿಗೆ ಮನವಿ ಮಾಡುವುದಾಗಿ ಜಮೀರ್ ನೀಡಿದ್ದ ಹೇಳಿಕೆ ಈಗ ಮಲ್ಲಿಕಾರ್ಜುನ ಅವರ ಕೆಂಗಣ್ಣಿಗೆ ಗುರಿಯಾಗಿದೆ.
ಇದೇ ವೇಳೆ ಸಚಿವ ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ ಅವರಿಗೆ ಟಿಕೆಟ್ ನೀಡಬೇಕೆಂದು ಕೆಲವು ನಾಯಕರು ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ನನಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಪಕ್ಷದ ಸಭೆ ಕರೆದಾಗ ನಾಯಕರು ಏನು ಹೇಳುತ್ತಾರೆ ಎಂಬುವುದನ್ನು ಕೇಳೋಣ. ಹೈಕಮಾಂಡ್ ತೆಗೆದುಕೊಳ್ಳುವ ಅಂತಿಮ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿ ಕೆಲಸ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.