ಅಂತಿಮ ಘಟ್ಟ ತಲುಪಿದ ಸಿಎಂ ಬದಲಾವಣೆ ಚರ್ಚೆ, ದಿಢೀರ್ ದೆಹಲಿ ಯಾತ್ರೆ ಹೊರಟ ಡಿಕೆಶಿ ಟೀಂ

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎರಡೂವರೆ ವರ್ಷ ಪೂರ್ಣಗೊಂಡಿದೆ. ಈ ಬೆನ್ನಲ್ಲೇ ಇದೀಗ ನವೆಂಬರ್‌ ಕ್ರಾಂತಿ ಚರ್ಚೆ ಅಂತಿಮ ಘಟ್ಟ ತಲುಪಿದೆ. ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ ಸಿದ್ದರಾಮಯ್ಯ ಅವರು ಈಗ ಸಿಎಂ ಕುರ್ಚಿಯನ್ನ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕಿದೆ. ಇತ್ತ ಸಿಎಂ ಸ್ಥಾನಕ್ಕೇರಲು ಡಿ.ಕೆ ಶಿವಕುಮಾರ್ ಸಹ ನಾನಾ ಪ್ರಯತ್ನ ಮಾಡುತ್ತಿದ್ದಾರೆ.

ಇದೀಗ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ರೋಚಕ ಘಟ್ಟ ತಲುಪಿದ್ದು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಬಲಿತ ಸಚಿವರು ಹಾಗೂ ಕೆಲವು ಶಾಸಕರು ದಿಢೀರ್ ದೆಹಲಿ ಯಾತ್ರೆ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ ವಿಚಾರ ಕಾಂಗ್ರೆಸ್ ನಲ್ಲಿ ಭುಗಿಲೆದಿದ್ದು, ಡಿಕೆ ಶಿವಕುಮಾರ್ ಪರವಾಗಿರುವ ಶಾಸಕರು ದೆಹಲಿಗೆ ತೆರಳಿದ್ದು, ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ ಎಂದು ಆಂತರಿಕ ಮೂಲಗಳು ಮಾಹಿತಿ ನೀಡಿವೆ.

ಚಾಮರಾಜನಗರದಲ್ಲಿ ಸಿದ್ದರಾಮಯ್ಯ ಇಂದು(ಗುರುವಾರ) ಎರಡೂವರೆ ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎನ್ನಲಾಗುತ್ತಿದೆ.

ನಾಳೆ ಇನ್ನಷ್ಟು ಡಿಕೆಶಿ ಬಣದ ಶಾಸಕರು ದೆಹಲಿಗೆ..!
ಕೆಲವು ಶಿವಕುಮಾರ್ ಪರ ಬೆಂಬಲಿಗರು ತಮ್ಮ ನಾಯಕನಿಗೆ ಸಿಎಂ ಹುದ್ದೆ ನೀಡಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಮೂಲಗಳ ಪ್ರಕಾರ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಇಕ್ಬಾಲ್ ಹುಸೇನ್, ಹೆಚ್.ಸಿ.ಬಾಲಕೃಷ್ಣ ಮತ್ತು ಎಸ್.ಆರ್.ಶ್ರೀನಿವಾಸ್ ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಶುಕ್ರವಾರ ಇನ್ನೂ ಹನ್ನೆರಡು ಶಾಸಕರು ದೆಹಲಿ ತಲುಪುವ ಸಾಧ್ಯತೆಯಿದೆ. ಕೆಲವು ದಿನಗಳ ಹಿಂದೆ ಸುಮಾರು ಒಂದು ಡಜನ್ ಎಂಎಲ್‌ಸಿಗಳು ರಾಷ್ಟ್ರ ರಾಜಧಾನಿಯಲ್ಲಿ ಬೀಡು ಬಿಟ್ಟು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ್ದಾರೆ ಎಂದು ಆಂತರಿಕ ಮೂಲಗಳು ಮಾಹಿತಿ ನೀಡಿವೆ.

Leave a Reply

Your email address will not be published. Required fields are marked *