ಚಿಕ್ಕಬಳ್ಳಾಪುರ : ಮುಖ್ಯಮಂತ್ರಿ ಬದಲಾವಣೆಯ ನಿರ್ಧಾರ ಹೈಕಮಾಂಡ್ಗೆ ಬಿಟ್ಟಿದ್ದು. ನಾನು ಸಿಎಂ ಹುದ್ದೆಯಲ್ಲಿ ಮುಂದುವರಿಯಬೇಕೆಂದು ಹೈಕಮಾಂಡ್ ನಿರ್ಧರಿಸಿದರೆ ನಾನು ಮುಂದುವರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಮತ್ತೆ ಹೈಕಮಾಂಡ್ನತ್ತ ಕೈ ತೋರಿಸಿದ್ದಾರೆ.
ಶಿಡ್ಲಘಟ್ಟದಲ್ಲಿ ರೇಶ್ಮೆ ಗೂಡು ಮಾರುಕಟ್ಟೆಗೆ ಶಂಕುಸ್ಥಾಪನೆ ನೆರೆವೇರಿಸಿದ ಬಳಿಕ ಮಾತನಾಡಿದ ಅವರು, ನಾಯಕತ್ವ ಬದಲಾವಣೆಯ ಬಗ್ಗೆ ಹೈಕಮಾಂಡ್ ಅಂತಿಮವಾಗಿ ನಿರ್ಧರಿಸುತ್ತದೆ. ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ, ನಾನು ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು.
ನಾವು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಅವರು ನಾನು ಸಿಎಂ ಮುಂದುವರಿಯಬೇಕೆಂದು ನಿರ್ಧರಿಸಿದರೆ, ನಾನು ಮುಂದುವರಿಯುತ್ತೇನೆ. ಅಂತಿಮವಾಗಿ, ಹೈಕಮಾಂಡ್ ಏನು ನಿರ್ಧರಿಸುತ್ತದೆಯೋ, ಅದನ್ನು ನಾನು ಒಪ್ಪಿಕೊಳ್ಳಬೇಕು. ಶಿವಕುಮಾರ್ ಕೂಡ ಅದನ್ನು ಒಪ್ಪಿಕೊಳ್ಳಬೇಕು
ನಾಲ್ಕೈದು ತಿಂಗಳ ಹಿಂದೆ, ಹೈಕಮಾಂಡ್ ಸಂಪುಟ ಪುನರ್ ರಚನೆಗೆ ಒಪ್ಪಿಗೆ ಸೂಚಿಸಿತ್ತು. ಆದರೆ, ಸರ್ಕಾರ 2.5 ವರ್ಷಗಳ ಅಧಿಕಾರ ಪೂರ್ಣಗೊಳಿಸಲಿ ಎಂದು ಸೂಚಿಸಿದ್ದರು ಎಂದ ಸಿಎಂ, ಈಗ ನಾವು ಹೈಕಮಾಂಡ್ ಏನು ನಿರ್ಧರಿಸುತ್ತದೆಯೋ ಅದನ್ನು ಅನುಸರಿಸುತ್ತೇವೆ ಎಂದು ಹೇಳಿದರು. ಇನ್ನು ಎರಡೂವರೆ ವರ್ಷಗಳ ಸರ್ಕಾರದ ನಂತರ ಅಧಿಕಾರ ಹಂಚಿಕೆಯ ಒಪ್ಪಂದವಾಗಿತ್ತೇ ಎಂದು ಕೇಳಿದಾಗ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಒಂದು ಲಕ್ಷ ಕೋಟಿ ರೂಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲಾಗಿದೆ. ನಾವು ನುಡಿದಂತೆ ನಡೆದ ಸರ್ಕಾರ ಎಂದು ಹೇಳಿದ್ದೆವು. ಅದರಂತೆ ನಡೆದಿದ್ದೇವೆ ಎಂದರು. ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಹೈ ಕಮಾಂಡ್ ಏನು ತೀರ್ಮಾನ ಮಾಡ್ತಾರೋ ಅದರಂತೆ ನಾನು ಹಾಗೂ ಡಿ. ಕೆ.ಶಿವಕುಮಾರ್ ಒಪ್ಪಬೇಕು ಎಂದರು.