ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕದನ ಜೋರಾಗಿರುವ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ವೈರಾಗ್ಯದ ಮಾತನಾಡಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಸಿಎಂ ಸಿದ್ದರಾಮಯ್ಯ ಅವರು 30 ತಿಂಗಳ ನಂತರವಾದ್ರು ಅಧಿಕಾರ ಬಿಡಬಹುದು, ಅಥವಾ ಅದಕ್ಕೂ ಮೊದಲೇ ಬಿಡಬಹುದು. ಅಧಿಕಾರ ಬಿಡುವುದಂತೂ ಪಕ್ಕಾ, ಯಾವಾಗಲಾದ್ರೂ ಬಿಡಲೇಬೇಕಲ್ಲವೆ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜಕೀಯ ನನಗೂ ಶಾಶ್ವತ ಅಲ್ಲ. ನಾನು ಯಾವುದಕ್ಕೂ ತಲೆ ಕೆಕೆಡಿಸಿಕೊಳ್ಳಲ್ಲ, ರಾಜಕೀಯ ನನ್ನಪ್ಪನ ಆಸ್ತಿಯೂ ಅಲ್ಲ ಎಂದರು.
ಇನ್ನು ಏನ್ ಆಗುತ್ತೋ ಆಗಲಿ ಎಂಬ ಸಿಎಂ ಸಿದ್ದರಾಮಯ್ಯ ಅವರ ವೈರಾಗ್ಯದ ಮಾತಿನ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ನಾವು ಒಂದೆ ಪಕ್ಷದಲ್ಲಿದ್ದೇವೆ, ಒಂದೆ ದಾರಿಯಲ್ಲಿದ್ದೇವೆ, ಸಿಎಂ ಮಾತನ್ನಾಡಿದ್ದು ಸರಿಯಾಗಿಯೇ ಇದೆ ಎಂದು ತಿಳಿಸಿದ್ದಾರೆ.
ಆದರೆ, ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡಲಿದೆ, ಹೈಕಮಾಂಡ್ ಯಾವಾಗ ತೀರ್ಮಾನ ಮಾಡುತ್ತೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಯಾವಗಲಾದರೂ ಒಂದು ದಿನ ಅಧಿಕಾರ ಬಿಡಲೇಬೇಕು, ಹತ್ತು ಸಾರಿ ಸಿಎಂ ಆದರೂ ಒಂದು ದಿನ ಬಿಡಲೇಬೇಕಲ್ಲ, ಅಧಿಕಾರ ಬಿಡಲೇಬೇಕು ಅಂದ್ರೆ ಬಿಡಲೇಬೇಕು ಎಂದು ವಿವರಿಸಿದರು.
ಹೈಕಮಾಂಡ್ ಹಾಗೂ ವರಿಷ್ಠರಿಗೆ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಚಾರ ತಿಳಿದಿದೆ ಎಂದು ವಿವರಿಸಿದ ಅವರು, ಯಾವ ರೀತಿಯಲ್ಲಿ ಹೈಕಮಾಂಡ್ ಈ ವಿಚಾರವನ್ನು ಬಗೆಹರಿಸುತ್ತೆ ಎನ್ನುವುದನ್ನು ನೋಡೋಣ ಎಂದರು. ಪಕ್ಷದಲ್ಲಿ ಒಳ್ಳೆಯ ವಾತಾವರಣ ಇರಬೇಕು ಅಂತ ಕಾರ್ಯಕರ್ತರು ಬಯಸುತ್ತಾರೆ, ಈ ಹಿನ್ನೆಲೆಯಲ್ಲಿ ವರಿಷ್ಠರು ಶೀಘ್ರದಲ್ಲಿಯೇ ಈ ಕುರಿತು ಸೂಕ್ತವಾದ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಕಳೆದ ರಾತ್ರಿ ಗೃಹ ಸಚಿವ ಪರಮೇಶ್ವರ್ ಅವರೊಂದಿಗೆ ನಡೆದ ಸಭೆಯ ಕುರಿತು ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಅವರು ನಿನ್ನೆ ಮನೆಗೆ ಬಂದಿದ್ರು, ನಾವು ಈ ರೀತಿಯಲ್ಲಿ ಸೇರ್ತಾನೆ ಇರುತ್ತೇವೆ. ಈ ಹಿಂದೆಯೂ ಸೇರಿದ್ದೆವು, ನಿನ್ನೆಯೂ ಸೇರಿದ್ದೆವು, ನಾಳೆನೂ ಸೇರುತ್ತೇವೆ ಎಂದರು.
ಇದರಲ್ಲಿ ದಲಿತ ಸಿಎಂ ವಿಚಾರ ಏನಿಲ್ಲ, ಈ ಅವಧಿಯಲ್ಲಿ ಆ ಬಗ್ಗೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಸಿಎಂ ಅಧಿಕಾರ ಹಸ್ತಾಂತರ ಬಗ್ಗೆ ಎಲ್ಲ ಮುಗಿದಿದೆ. ಈಗ ಮತ್ತೆ ಅದನ್ನು ಶುರು ಮಾಡುವುದು ಬೇಡ, ಪದೇ ಪದೇ ಆ ವಿಚಾರ ಮಾತನಾಡುವುದು ಬೇಡ. ಸಚಿವ ಸಂಪುಟ ಪುನಾರಚನೆ ಬಗ್ಗೆ ಗೊತ್ತಿಲ್ಲ ಎಂದರು.