ಅವಿವೇಕಿಯಂತೆ ಬಾಯಿ ತೆವಲಿಗಾಗಿ ಮನಸ್ಸಿಗೆ ಬಂದ ಸುಳ್ಳು ಹೇಳಬೇಡಿ : ಛಲವಾದಿಗೆ ಡಿಕೆ ಟಾಂಗ್

ಬೆಂಗಳೂರು : ಡಿಸಿಎಂ ಡಿ.ಕೆ. ಶಿವಕುಮಾರ್ ತಾವು ಧರಿಸಿರುವ ಐಷಾರಾಮಿ ವಾಚ್‌ಗಳ ಕುರಿತು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾಡಿದರುವ ಟೀಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ತಮ್ಮ ಪಾರದರ್ಶಕತೆ ಮತ್ತು ಶ್ರೀಮಂತಿಕೆಯನ್ನು ಪ್ರಶ್ನಿಸಿದ ಛಲವಾದಿ ನಾರಾಯಣಸ್ವಾಮಿಯವರನ್ನು ‌ಅವಿವೇಕಿ ಎಂದು ಟೀಕಿಸಿರುವ ಡಿಕೆಶಿ, ನೇರವಾಗಿ ತಮ್ಮ ಲೋಕಾಯುಕ್ತ ಅಫಿಡವಿಟ್ ಅನ್ನು ಪರಿಶೀಲಿಸುವಂತೆ ಸವಾಲು ಹಾಕಿದ್ದಾರೆ.

ಇದನ್ನೂ ಓದಿ : ನಾನು ನಾರಾಯಣಸ್ವಾಮಿ ಮನೆಯಿಂದಲೇ ಕಾರ್ಟಿಯರ್​ ವಾಚ್​ ಕದ್ದಿದ್ದು : ಡಿಕೆಶಿ ಡಿಚ್ಚಿ


ಏನಿದು ₹42 ಲಕ್ಷದ ಕಾರ್ಟಿಯರ್ ವಾಚ್ ವಿವಾದ..?

ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಇತ್ತೀಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಧರಿಸಿರುವ ಐಷಾರಾಮಿ ಕಾರ್ಟಿಯರ್ ವಾಚ್ ಕುರಿತು ಸಾರ್ವಜನಿಕವಾಗಿ ಪ್ರಶ್ನೆ ಎತ್ತಿದ್ದರು. ಮಾರುಕಟ್ಟೆಯಲ್ಲಿ ಈ ವಾಚ್‌ನ ಮೌಲ್ಯ ಸುಮಾರು ₹42 ಲಕ್ಷ ಎಂದು ವರದಿಯಾಗಿದ್ದು, ಇಷ್ಟು ದುಬಾರಿ ಬೆಲೆಯ ವಾಚ್‌ ಖರೀದಿಗೆ ಹಣದ ಮೂಲ ಯಾವುದು? ಆಸ್ತಿ ಘೋಷಣೆಯಲ್ಲಿ ಇದನ್ನು ತೋರಿಸಲಾಗಿದೆಯೇ? ಎಂದು ನಾರಾಯಣಸ್ವಾಮಿ ಅವರು ಪರೋಕ್ಷವಾಗಿ ಪ್ರಶ್ನಿಸಿದ್ದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿಕೆಶಿ ಅವರ ಆರ್ಥಿಕ ಪಾರದರ್ಶಕತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ ಆರೋಪ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು.

ಬಾಯಿ ತೆವಲಿಗಾಗಿ ಸುಳ್ಳು ಹೇಳಬಾರದು..!

ನಾರಾಯಣಸ್ವಾಮಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಡಿಕೆಶಿ, ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ನಾರಾಯಣ ಸ್ವಾಮಿಯವರಿಗೆ ಟ್ಯಾಗ್ ಮಾಡಿ, ‘ಮಿಸ್ಟರ್ ನಾರಾಯಣಸ್ವಾಮಿ, ಇಲ್ಲಿದೆ ನೋಡಿ ಲೋಕಾಯುಕ್ತಕ್ಕೆ ನಾನು ಸಲ್ಲಿಸಿರೋ ಅಫಿಡವಿಟ್! ಎಂದು ಬರೆದು, ದಾಖಲೆಗಳ ಮೂಲಕ ತಿರುಗೇಟು ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರೋ ನೀವು ನಿಮ್ಮ ಬಾಯಿ ತೆವಲಿಗಾಗಿ ಮನಸ್ಸಿಗೆ ಬಂದಂತೆ ಸುಳ್ಳು ಹೇಳಬಾರದು. ಇದು ನಿಮಗೆ ಘನತೆ ತರುವುದಿಲ್ಲ! ನಾನು ಪಾರದರ್ಶಕ ವ್ಯಕ್ತಿ. ಏನನ್ನೂ ಮುಚ್ಚಿಟ್ಟುಕೊಳ್ಳಬಾರದು ಅಂತಲೇ ನಿಜ ಹೇಳಿದ್ದೇನೆ’ ಎಂದು ಡಿಕೆಶಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ  ‘ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ’ ಆಡಬೇಡಿ. ನಿಮಗಿರೋ ಸಾಂವಿಧಾನಿಕ ಅಧಿಕಾರ, ಜವಾಬ್ದಾರಿಯನ್ನು ವಿವೇಕದಿಂದ ನಿರ್ವಹಿಸಿ. ಅವಿವೇಕಿಯಂತೆ ಆಡಬೇಡಿ!’ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.ಇನ್ನೂ ‘ಬೇಕಿದ್ದರೆ ಲೋಕಾಯುಕ್ತ ಕಚೇರಿಗೆ ಹೋಗಿ ನನ್ನ ಅಫಿಡವಿಟ್ ಚೆಕ್ ಮಾಡಿಕೊಳ್ಳಿ’ ಎಂದು ನೇರ ಸವಾಲು ಹಾಕುವ ಮೂಲಕ, ತಮ್ಮ ಸಂಪತ್ತಿನ ವಿವರಗಳ ಕುರಿತು ಯಾವುದೇ ಸಂಶಯ ಇಲ್ಲ ಎಂಬುದನ್ನು ಡಿಸಿಎಂ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *