ಗುಜರಾತ್ : ಗುಜರಾತ್‌ನ ಮೆಹಸಾನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿ ಅಚ್ಚರಿಯ ನಿರ್ಧಾರ ಕೈಗೊಂಡಿದೆ. ಕಳೆದ 28 ವರ್ಷಗಳಿಂದ ಮೆಹಸಾನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುಮಾಸ್ತನಾಗಿ ಸೇವೆ ಸಲ್ಲಿಸುತ್ತಿದ್ದ ರಮೇಶ್ ಭಿಲ್ ಅವರಿಗೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿದೆ.
50 ವರ್ಷದ ರಮೇಶ್ ಭಿಲ್ ಅವರು ಕಳೆದ 28 ವರ್ಷಗಳಿಂದ ಬಿಜೆಪಿ ಕಚೇರಿಯಲ್ಲಿ ನಿಷ್ಠಾವಂತ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಕಚೇರಿಯ ನಿರ್ವಹಣೆ, ಹಿರಿಯ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಚಹಾ ಹಾಗೂ ನೀರು ಸರಬರಾಜು ಮಾಡುವ ಕೆಲಸವನ್ನು ಅವರು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದರು. ಕೇವಲ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರುವ ಇವರು, ಈಗ ವಾರ್ಡ್ ಸಂಖ್ಯೆ 13ರ ಅಧಿಕೃತ ಅಭ್ಯರ್ಥಿಯಾಗಿ ಶನಿವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ : ದಾವಣಗೆರೆ ದಂಗಲ್, ಜಬ್ಬಾರ್ ರಾಜೀನಾಮೆ ಅಂಗೀಕಾರ, ಅಲ್ಪಸಂಖ್ಯಾತ ಘಟಕಕ್ಕೆ ಡಿಕೆಶಿ ಬಿಗ್ ಶಾಕ್..!
ಪಕ್ಷದ ಈ ನಿರ್ಧಾರವು ಕಾರ್ಯಕರ್ತರೇ ಮೊದಲು ಎಂಬ ಸಿದ್ಧಾಂತಕ್ಕೆ ಸಾಕ್ಷಿಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಸ್ಥಾನ ಸಿಗಬಹುದು ಎಂಬ ಸಂದೇಶವನ್ನು ಇದು ನೀಡಿದೆ. ತಳಮಟ್ಟದ ಕಾರ್ಯಕರ್ತರೊಂದಿಗೆ ರಮೇಶ್ ಅವರಿಗಿರುವ ನಿಕಟ ಸಂಪರ್ಕ ಮತ್ತು ಅವರ ನಿಷ್ಠೆಯನ್ನು ಪರಿಗಣಿಸಿ ಈ ಅವಕಾಶ ನೀಡಲಾಗಿದೆ ಎಂದು ಸ್ಥಳೀಯ ನಾಯಕರು ತಿಳಿಸಿದ್ದಾರೆ.
ಕಳೆದ 28 ವರ್ಷಗಳಿಂದ ಸಂಪೂರ್ಣ ಸಮರ್ಪಣಾ ಮನೋಭಾವದಿಂದ ನಾನು ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಸೇವೆ ಮಾಡಿದ್ದೇನೆ. ಈಗ ಪಕ್ಷವು ನನಗೆ ನನ್ನ ವಾರ್ಡ್‌ನ ಜನರ ಸೇವೆ ಮಾಡಲು ಅವಕಾಶ ನೀಡಿದೆ. ಈ ಹೊಸ ಜವಾಬ್ದಾರಿಯನ್ನು ಕೂಡ ಅಷ್ಟೇ ಪ್ರಾಮಾಣಿಕತೆಯಿಂದ ನಿಭಾಯಿಸುತ್ತೇನೆ, ಎಂದು ರಮೇಶ್ ಭಿಲ್ ನಾಮಪತ್ರ ಸಲ್ಲಿಸಿದ ನಂತರ ಭಾವುಕರಾಗಿ ನುಡಿದರು.