‘ಕೆಲವು ಸಚಿವರು ಶಾಸಕರ ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ, ದೇವಲೋಕದಿಂದ ಬಂದಂಗೆ ಆಡ್ತಾರೆ’

ಮಂಡ್ಯ : ಹೊಸಬರಿಗೆ ಮಂತ್ರಿಗಿರಿ ನೀಡುವಂತೆ ತಾವು ಸೇರಿದಂತೆ 38 ಶಾಸಕರು ಪತ್ರ ಬರೆದಿದ್ದು, ಐದು ಮಂದಿ ಹೊಸಬರಿಗೆ ಮಂತ್ರಿಗಿರಿ ನೀಡುವಂತೆ ಕೋರಿದ್ದೇವೆ. ಹೊಸದಾಗಿ ಶಾಸಕರಾದವರಿಗೆ ಸಚಿವ ಸ್ಥಾನ ಸಿಗಬೇಕು ಎಂಬ ತಮ್ಮ ಆಗ್ರಹದಲ್ಲಿ ಯಾವುದೇ ಬದಲಾವಣೆ ಇಲ್ಲ. ವೈಯಕ್ತಿಕವಾಗಿ ತನಗೆ ಸಚಿವ ಸ್ಥಾನ ಬೇಡ ಎಂದು ರವಿಕುಮಾರ್​​ ಗಣಿಗ ತಿಳಿಸಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಕೆಲವು ಸಚಿವರು ಶಾಸಕರ ಕೈಗೆ ಸಿಗುತ್ತಿಲ್ಲ, ಅವರಿಂದ ಯಾವುದೇ ಕೆಲಸವಾಗುತ್ತಿಲ್ಲ. ಫೋನ್ ಕರೆಯನ್ನೂ ಸ್ವೀಕರಿಸುತ್ತಿಲ್ಲ. ತಾವು ದೇವಲೋಕದಿಂದ ಬಂದವರು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಹಲವು ಸಚಿವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು ಅಂತಹವರು ಮುಂದುವರಿಯಲಿ. ಆದರೆ, ಕೆಲವರನ್ನು ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ಕೊಡುವುದು ಒಳ್ಳೆಯದು ಎಂದರು.

ಇದನ್ನೂ ಓದಿ : ಸಂಪುಟ ಪುನರ್‌ ರಚನೆ ಕಸರತ್ತು, ದೆಹಲಿಗೆ ತೆರಳಿದ ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ಶಾಕ್, ಖಡಕ್ ವಾರ್ನಿಂಗ್!

ಇನ್ನು ಚಲುವರಾಯಸ್ವಾಮಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಮಂಡ್ಯ ಜಿಲ್ಲೆಯಲ್ಲಿ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡರು ಸಹ ಹಿರಿಯರಿದ್ದು, ಅವರಿಗೂ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು. ದಲಿತ ಖೋಟಾದಲ್ಲಿ ನರೇಂದ್ರಸ್ವಾಮಿ ಅವರಿಗೆ ಕೊಟ್ಟರೆ ಖುಷಿ ಎಂದರು.

ಮೇಲಾಗಿ ನಾಯಕತ್ವದ ಬದಲಾವಣೆಯ ಕೂಗು ಶುರುವಾಗುವ ಮುನ್ನವೇ ಸಂಪುಟ ಪುನರ್‌ ರಚನೆ ಮಾಡಿದರೆ, ಗೊಂದಲಗಳು ಬಗೆ ಹರಿಯುತ್ತವೆ. ಮುಖ್ಯಮಂತ್ರಿ ಸ್ಥಾನ ಅಬಾಧಿತವಾಗಿರಲಿದೆ ಎಂಬುವುದು ಸಿದ್ದರಾಮಯ್ಯ ಅವರ ಬಣದ ಲೆಕ್ಕಚಾರ. ಇದಕ್ಕಾಗಿ ಹಿರಿಯ ಶಾಸಕರು ದೆಹಲಿಗೆ ತೆರಳಿ ಸಂಪುಟ ಪುನರ್‌ ರಚನೆಗೆ ಅವಕಾಶ ಮಾಡಿಕೊಡಿ ಎಂದು ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಹೊಸಬರಾಗಲಿ, ಹಳಬರಾಗಲಿ ಎಲ್ಲರಿಗೂ ಸಚಿವರಾಗುವ ಆಸೆ ಇರುತ್ತದೆ. ಅದಕ್ಕಾಗಿ ದೆಹಲಿ ಹೈಕಮಾಂಡ್ ಹತ್ತಿರ ಹೋಗುತ್ತಾರೆ. ನಾವು ಕೂಡ ಹಾಗೆ ಮನವಿ ಮಾಡಿದ್ದೇವೆ. ಆದರೆ ಅಂತಿಮ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಅವರು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *