ಬೆಂಗಳೂರು : ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್ ರಚನೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಸಾರಿಗೆ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಮಹತ್ವದ ಹೇಳಿಕೆಯೊಂದನ್ನ ನೀಡಿದ್ದಾರೆ. ಪಕ್ಷದ ಹೈಕಮಾಂಡ್ ಸೂಚಿಸಿದ್ರೆ ನಾನು ಇಂದೇ ನನ್ನ ಸಚಿವ ಸ್ಥಾನವನ್ನು ತ್ಯಜಿಸಲು ಸಿದ್ಧನಿದ್ದೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಆಕಾಂಕ್ಷಿಯಾಗಿ ದೆಹಲಿಗೆ ತೆರಳಿರುವ ಶಾಸಕರ ನಡೆಯನ್ನು ಸಮರ್ಥಿಸಿಕೊಂಡರು. ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಎರಡೂವರೆ ವರ್ಷದ ನಂತರ ಸಂಪುಟ ಪುನಾರ್ ರಚನೆಯಾಗುತ್ತದೆ ಎಂಬ ಮಾತಿತ್ತು. ಈಗ ಹಿರಿಯ ಶಾಸಕರು ಸಚಿವ ಸ್ಥಾನ ಕೇಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರಜಾಪ್ರಭುತ್ವದಲ್ಲಿ ತಮ್ಮ ಆಕಾಂಕ್ಷೆಯನ್ನು ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ ಎಂದರು.
ಇನ್ನು ದೆಹಲಿಗೆ ತೆರಳಿರುವ ಶಾಸಕರು ಮುಖ್ಯಮಂತ್ರಿ ಬದಲಾವಣೆಗೆ ಒತ್ತಾಯಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರೆಡ್ಡಿ, ಶಾಸಕರು ದೆಹಲಿಗೆ ಹೋಗಿರುವುದು ಸಚಿವ ಸ್ಥಾನದ ಬೇಡಿಕೆಗಾಗಿಯೇ ಹೊರತು ಮುಖ್ಯಮಂತ್ರಿ ಬದಲಾವಣೆಗಲ್ಲ. ಆ ವಿಚಾರದ ಬಗ್ಗೆ ನನ್ನನ್ನು ಕೇಳಲು ಬರಬೇಡಿ. ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಸ್ಥಾನ ಬಿಡು ಎಂದರೆ ಕ್ಷಣಾರ್ಧದಲ್ಲಿ ಬಿಡುತ್ತೇನೆ ಎಂದು ಸ್ಪಷ್ಟನೆ ನೀಡಿದ್ರು.