ನಾನು ಮುಸ್ಲಿಂ ಸಮುದಾಯದ ಸುಪ್ರೀಂ ಲೀಡರ್ ಅಲ್ಲ, ಹಾಗಂತ ಯಾರ್ ಹೇಳಿದ್ರು..?

ಬೆಂಗಳೂರು : ನಾನು ಮುಸ್ಲಿಂ ಸಮುದಾಯದ ಸುಪ್ರೀಂ ಲೀಡರ್ ಅಲ್ಲ. ಹಾಗಂತ ನಿಮಗೆ ಯಾರ್ ಹೇಳಿದ್ರು. ದಾವಣಗೆರೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೇಳಿದ್ದರಲ್ಲಿ ಮುಚ್ಚು ಮರೆ ಏನಿಲ್ಲ. ದಾವಣಗೆರೆಯಲ್ಲಿ ನನ್ನ ಕೆಲಸ ನಿಭಾಯಿಸಿದ್ದೇನೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಾನು ಲೀಡರ್ ಆಗಲು ಹೊರಟಿಲ್ಲ. ಮುಂದೇಯೂ ಲೀಡರ್ ಆಗೋಕೆ ಹೋಗಲ್ಲ. ನಾನೊಬ್ಬ ಸೇವಕ, ಜನರ ಸೇವೆ ಮಾಡುತ್ತಿದ್ದೇನೆ ಅಷ್ಟೇ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ದಾವಣಗೆರೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೇಳಿದರಲ್ಲಿ ಮುಚ್ಚುಮರೆ ಏನಿಲ್ಲ. ನಾನು ಯಾವುದೇ ಮುಚ್ಚುಮರೆ ಮಾಡಿಲ್ಲ‌. ಓಪನ್ ಆಗಿ ನಾನು ಕೆಪಿಸಿಸಿ ಸಭೆಯಲ್ಲಿ ಹೇಳಿದ್ದೆ‌. ನಾನು ಜಬ್ಬಾರ್ ಹೆಸರು ಹೇಳಿಲ್ಲ. ಜಬ್ಬಾರ್ ಬದಲು ಏಳು ಮಂದಿ ಮುಸ್ಲಿಮರಿಗೆ ಯಾರಿಗಾದರೂ ಕೊಡಿ ಅಂದಿದ್ದೆ. ಶಿಗ್ಗಾವಿಯನ್ನು ಕೇಳಿ ತೆಗೆದುಕೊಂಡ್ವಿ. ದಾವಣಗೆರೆಯಲ್ಲೂ ಯಾರಿಗಾದರೂ ಕೊಡಿ, ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಸಭೆಯಲ್ಲಿ ಓಪನ್ ಆಗಿ ಡಿಕೆಶಿ ಅವರ ಮುಂದೆ ಹೇಳಿದ್ದೇನೆ. ಗೆಲ್ಲಿಸಿಕೊಂಡು ಬರಲಿಲ್ಲ ಅಂದರೆ ರಾಜೀನಾಮೆ ಕೊಡ್ತೀನಿ ಅಂತ ಹೇಳಿದ್ದೆ.

ಇದನ್ನೂ ಓದಿ : ಹೈಕಮಾಂಡ್ ಹೇಳಿದ್ರೆ ಇಂದೇ ನನ್ನ ಸಚಿವ ಸ್ಥಾನವನ್ನು ತ್ಯಜಿಸಲು ಸಿದ್ಧ : ರಾಮಲಿಂಗಾ ರೆಡ್ಡಿ

ಜಬ್ಬಾರ್ ರಾಜೀನಾಮೆ ಕೊಟ್ಟಿದ್ದಾರೆ. ಆಗ ನಾನು ಇರಲಿಲ್ಲ. ರಾಜೀನಾಮೆ ಕೊಟ್ಟಿದ್ದಾರೆ ಅಂತ ಗೊತ್ತಾಯ್ತು. ನಸೀರ್ ಅವರನ್ನು ಕೈಬಿಟ್ಟಿದ್ದು ನನಗೆ ಗೊತ್ತಿಲ್ಲ. ಈಗ ಸಿಎಂ ಸಿದ್ದರಾಮಯ್ಯ ಮನೆಗೆ ಹೋಗಿ ಮಾತಾಡ್ತೀನಿ.

ಸುದ್ದಿಗೋಷ್ಠಿ ಮಾಡಿರುವವರು ಯಾರಾದರೂ ಹೆಸರು ಹೇಳಿದ್ದಾರಾ? ಅಲ್ಲಿ ಮುಸಲ್ಮಾನರ ಅಸಮಾಧಾನ ಇದ್ದಿದ್ದು ನಿಜ. ಮುಸ್ಲಿಮರಿಗೆ ಟಿಕೆಟ್ ಕೇಳಿದ್ರೂ ಟಿಕೆಟ್ ಕೊಟ್ಟಿಲ್ಲ ಅನ್ನೋ ಅಸಮಾಧಾನ ಇತ್ತು. ಅದು ಸರಿ ಹೋಗಿ ಪಕ್ಷದ ಅಭ್ಯರ್ಥಿಯಾಗಿ ಸಮರ್ಥ್ ಅವರಿಗೆ ಅವಕಾಶ ಕೊಟ್ಟರು. ಈಗ ನಾವು ಅಲ್ಲಿ ಗೆದ್ದೇ ಗೆಲ್ತೇವೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದು ತಿಳಿಸಿದರು. ಜಬ್ಬಾರ್ ಅವರು ಮೊದಲು ಟಿಕೆಟ್ ಕೇಳಿದ್ದು ಸರಿ. ಆದರೆ, ತೀರ್ಮಾನ ಮಾಡಬೇಕಾಗಿರೋದು ಹೈಕಮಾಂಡ್. ಜಬ್ಬಾರ್‌ಗೆ ಕೊಡೋದಕ್ಕೆ ಆಗಲ್ಲ ಅಂತ ಹೈಕಮಾಂಡ್ ಚಿಂತನೆ ಮಾಡ್ತಾ ಇದೆ ಅಂದಾಗ ಯಾರಿಗಾದರೂ ಕೊಡಿ ಅಂತ ಹೇಳಿದ್ದೇವೆ‌. ಜಬ್ಬಾರ್ ಅವರು ಎಂಎಲ್​ಸಿ ಇದ್ದಾರೆ. ಅವರಿಗೆ ಕೇಳೋದು ಸರಿ ಅಲ್ಲ ಅಂತ ಆದ್ಮೇಲೆ ಬೇರೆಯವರಿಗೆ ಅವಕಾಶ ಕೊಡಿ ಅಂತ ಕೇಳಿದ್ದೇವೆ ಎಂದರು.

ದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ್ ಅವರು ನಮ್ಮ ಪಕ್ಕದ ಮನೆಗೆ ಬಂದು ನಮ್ಮ ಮನೆಗೆ ಬಂದಿಲ್ಲ ಅಂತಾ ಜಬ್ಬಾರ್ ಹೇಳಿದ್ರು. ನಾನು ಸ್ಥಳೀಯ ಲೀಡರ್ ಅವರ ಜೊತೆಯಲ್ಲೇ ಇದ್ದವನು. ನಮ್ಮ ಮನೆಗೆ ಕನಿಷ್ಠ ಬರಬೇಕಿತ್ತಲ್ವಾ ಎಂದು ಜಬ್ಬಾರ್ ಬೇಜಾರಾಗಿದ್ರು. ಜೊತೆಗೆ ಅವರ ಆರೋಗ್ಯ ಕೂಡ ಚೆನ್ನಾಗಿರಲಿಲ್ಲ‌ ಅಂತ ಮಾಧ್ಯಮಕ್ಕೂ ಹೇಳಿದ್ದಾರೆ. ನಾನು ಕೂಡ ಜಬ್ಬಾರ್ ಜೊತೆ ಮಾತನಾಡಿ, ಹೋಗಿ ಕೆಲಸ ಮಾಡಿ ಅಂತ ಹೇಳಿದ್ದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *