ಬೆಂಗಳೂರು : ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ, ನಸಿರ್ ಅಹಮದ್ ಹಾಗೂ ಎಂಎಲ್ಸಿ ಅಬ್ದುಲ್ ಜಬರ್ ಅವರ ವಿರುದ್ಧ ಪಕ್ಷ ಕಠಿಣವಾದ ಕ್ರಮ ತೆಗೆದುಕೊಂಡಿದೆ ಈ ವಿಚಾರವಾಗಿ ಮಾಜಿ ಸಚಿವ ಕೆ.ಎನ್.ರಾಜಣ್ಣ ಸಿಎಂ ಸಿದ್ದರಾಮಯ್ಯರ ವಿರುದ್ಧ ಬೇಸರ ಹೊರ ಹಾಕಿದ್ದಾರೆ.
ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷ ನಿಷ್ಠರ ವಿರುದ್ಧವೇ ಕಾಂಗ್ರೆಸ್ ಪಕ್ಷ ಕ್ರಮ ಕೈಗೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯ ಪರ ಇದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ವಿರುದ್ಧ ಸಿಎಂ ಸಿದ್ದರಾಮಯ್ಯ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರಿಂದ ಇಂತಹ ಅಸಹಾಯಕತೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಯಾವ ಯೋಚನೆ ಇದೆಯೋ ನನಗೆ ಗೊತ್ತಿಲ್ಲ ಎಂದು ರಾಜಣ್ಣ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ : ನನ್ನ ತಂದೆ ಸಿಎಂ ಆಗಿ ಇರೋವರೆಗೂ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ : ಯತೀಂದ್ರ ಸಿದ್ದರಾಮಯ್ಯ
ಸಿಎಂರಿಂದ ಇಂಥ ಅಸಹಾಯಕತೆ ನಿರೀಕ್ಷಿಸಿರಲಿಲ್ಲ. ಸಿಎಂಗೆ ಏನು ಅಡೆತಡೆ ಇದೆಯೋ ಗೊತ್ತಿಲ್ಲ. ಯಾಕೆ ತಟಸ್ಥ ಧೋರಣೆ ತಾಳ್ತಿದ್ದಾರೋ ಗೊತ್ತಿಲ್ಲ. ಅವರು ನಮಗೆ ಹೇಳಲ್ಲ. ಸಿಎಂ ಪರ ಇರುವವರನ್ನು ಟಾರ್ಗೆಟ್ ಮಾಡ್ತಿದ್ದಾರೆ. ಇದನ್ನು ಜನರೇ ಹೇಳ್ತಿದ್ದಾರಲ್ಲ? ಎಂದು ಅಸಮಾಧಾನ ಹೊರಹಾಕಿದರು.
ಪಕ್ಷಕ್ಕೆ ನಿಷ್ಠೆಯಿಂದ ಇರುವವರ ಮೇಲೆ ಮತ್ತು ಪಕ್ಷಕ್ಕಾಗಿ ಕೆಲಸ ಮಾಡುವವರ ಮೇಲೆ ಪಟ್ಟಭದ್ರ ಹಿತಾಸಕ್ತಿಗಳು ಹುನ್ನಾರ ಮಾಡಿದ್ದರಿಂದ ಈ ರೀತಿ ಆಗುತ್ತದೆ. ಆದರೆ ಸಿಎಂ ಇಂತಹ ಸಂಗತಿಗಳು ಬಂದಾಗ ಗಟ್ಟಿಯಾಗಿ ನಿಲ್ಲಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ರಾಹುಲ್ ಗಾಂಧಿ ಯಾರು ಅಂದಿದ್ದವರ ಜೊತೆ ವೇದಿಕೆ ಹಂಚಿಕೊಂಡ್ರು, ಅಧ್ಯಕ್ಷರು ಪ್ರಯಾಗ್ ರಾಜ್ಗೆ ಹೋಗಲ್ಲ ಅಂದ್ರು, ಅಂತಹ ಜಾಗಕ್ಕೆ ಹೋದವರು ಯಾರು?. ಅವರ ಮೇಲೆ ಯಾವ ಕ್ರಮವೂ ಇಲ್ಲ. ಇಲ್ಲಿ ಮಾತ್ರ ಕ್ರಮ ಅಂದ್ರೆ ಹೇಗೆ? ಎಂದು ಡಿಕೆಶಿ ಹೆಸರು ಹೇಳದೆೆಯೇ ಟೀಕಿಸಿದರು.
ಶಿವಮೊಗ್ಗದಲ್ಲಿ ಶಾಮನೂರು ಏನು ಹೇಳಿದ್ರು?. ಬಿ.ವೈ.ರಾಘವೇಂದ್ರನನ್ನು ಗೆಲ್ಲಿಸಿ ಅಂದಿದ್ದರು. ಇದು ಪಕ್ಷವಿರೋಧಿ ಧೋರಣೆ ತಾನೇ?. ಯಾಕೆ ಅವರ ಮೇಲೆ ಆಗ ಕ್ರಮ ಆಗಲಿಲ್ಲ?. ಇಲ್ಯಾಕೆ ಕ್ರಮ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಪುಟ ಪುನಾರಚನೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಂಪುಟ ಪುನಾರಚನೆ ಮಾಡಲಿ. ದೆಹಲಿಗೆ ಹೋದವರಿಗೆ ಅವಕಾಶ ಕೊಡಲಿ. ನಾನು ಸಚಿವ ಸ್ಥಾನ ಕೇಳೋನುೂ ಅಲ್ಲ. ಅದು ನನಗೆ ಬೇಡವೇ ಬೇಡ ಎಂದು ಸ್ಪಷ್ಟಪಡಿಸಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ಮುಖಂಡರಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಪಕ್ಷ ವಿರೋಧಿ ಆರೋಪದ ಮೇಲೆ ಕೆಲ ಮುಸ್ಲಿಂ ಮುಖಂಡರ ಮೇಲೆ ಕಾಂಗ್ರೆಸ್ ಕ್ರಮ ಕೈಗೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪಕ್ಷ ವಿರೋಧಿ ಆರೋಪದ ಮೇಲೆ ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದಿಂದ ಕಾಂಗ್ರೆಸ್ ಅಮಾನತು ಮಾಡಲಾಗಿದೆ. ನಸೀರ್ ಅಹಮದ್ ಅವರನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತಕ್ಷಣವೇ ಬಿಡುಗಡೆಗೊಳಿಸಿರುವುದು ಸಂಚಲನ ಸೃಷ್ಟಿಸಿದೆ.