ಬೆಳಗಾವಿ : ಸಿಎಂ ಸ್ಥಾನಕ್ಕೆ ಅರ್ಜಿ ಕರೆದರೆ ಹಾಕಬಹುದು. ಆದ್ರೆ, ಅರ್ಜಿಯನ್ನೇ ಕರೆಯೋದಿಲ್ಲವಲ್ಲ ಎನ್ನುವ ಮೂಲಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರೋಕ್ಷವಾಗಿ ತಾವೂ ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಆಸೆ ಇದೆ ಎಂದು ನಿಮಗೆ ಯಾರು ಹೇಳಿದರು? ನಮ್ಮ ಪಕ್ಷದಲ್ಲಿ ಏನೇ ತೀರ್ಮಾನ ಆಗಬೇಕಾದರೂ, ಅದನ್ನು ಹೈಕಮಾಂಡ್ ತೀರ್ಮಾನಿಸಬೇಕು. ಸಂಪುಟ ಪುನರ್ ರಚನೆ, ಸಿಎಂ ಬದಲಾವಣೆ, ಯಾರಿಗೆ ಅರ್ಹತೆ ಇದೆ, ಯಾರಿಗೆ ಅರ್ಹತೆ ಇಲ್ಲ ಎಂಬುದು ಸೇರಿ ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
224 ಶಾಸಕರು ಮಂತ್ರಿ ಆಗಲು ಅರ್ಹರಿದ್ದಾರೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ನಮ್ಮ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಎಲ್ಲಾ 136 ಶಾಸಕರಿಗೂ ಸಚಿವರಾಗಲು ಅರ್ಹತೆ ಇದೆ. ಆದರೆ, ಅದರಲ್ಲಿ ಸಚಿವರನ್ನಾಗಿ ಮಾಡುವುದು ಕೇವಲ ಶೇ.15ರಷ್ಟು ಮಾತ್ರ.
ಈಗಿರುವ ಮಂತ್ರಿಗಳನ್ನು ಸಂಪುಟ ಪುನರ್ ರಚನೆಯಲ್ಲಿ ಬದಲಾಯಿಸಿ, ಬೇರೆಯವರಿಗೆ ಮಂತ್ರಿ ಸ್ಥಾನ ನೀಡುವುದು ಎಲ್ಲಾ ಸರ್ಕಾರದಲ್ಲೂ ಆಗುತ್ತದೆ. ಹೀಗಾಗಿ, ಎರಡು, ಮೂರು ಬಾರಿ ಗೆದ್ದ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅವರಿಗೆ ಅರ್ಹತೆ ಇರುವುದರಿಂದ ಕೇಳುತ್ತಿದ್ದಾರೆ. ಅಂತಿಮವಾಗಿ ಹೈಕಮಾಂಡ್ನವರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.