ಸಚಿವ ಡಿ.ಸುಧಾಕರ್‌ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಕೆಲ‌ವರು ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಎಕ್ಸ್‌ಪರ್ಟ್: ಹೆಚ್‌ಡಿಕೆ ಕಿಡಿ

ಚಿತ್ರದುರ್ಗ : ಸಚಿವ ಡಿ.ಸುಧಾಕರ್‌ ಅವರ‌ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೆಲ‌ವರು ಇಂತಹ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಎಕ್ಸ್‌ಪರ್ಟ್ ಇದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಸುಧಾಕರ್ ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ, ಸುಧಾಕರ್ ಅವರ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ನೀವಂದುಕೊಂಡಷ್ಟು ಸುಲಭವಲ್ಲ, ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಅಷ್ಟು ಸುಲಭವಲ್ಲ : ವಾಟಾಳ್ ನಾಗರಾಜ್

ಇದರ ಬೆನ್ನಲ್ಲೇ ಇಂದು ಚಿತ್ರದುರ್ಗದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಸಚಿವ‌ ಸುಧಾಕರ್ ಅವರು ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿದ್ದಾರೆ. ಈ ವೇಳೆ ನಾನು ಜೆಡಿಎಸ್ ಸ್ಥಾನದ ಬಗ್ಗೆ ಚರ್ಚೆ ಮಾಡಲ್ಲ. ಹಿರಿಯೂರು ಸೇರಿದಂತೆ ಬೇರೆ ಕ್ಷೇತ್ರದ ಬಗ್ಗೆಯೂ ಮಾತಾಡಲ್ಲ. ಆದರೆ ಆಸ್ಪತ್ರೆಯ ಒಳಗೆ ಏನು ನಡೆಯುತ್ತಿದೆ ಎಂಬುದನ್ನು ನೋಡಬೇಕು. ಆ ವ್ಯಕ್ತಿ ಎಷ್ಟು ನೋವು ಅನುಭವಿಸುತ್ತಿದ್ದಾನೋ ಪಾಪ. ಯಾವ ಕಾರಣಕ್ಕೆ ಕೆಲ ವಿಷಯ ಮುಚ್ಚಿಟ್ಟಿದ್ದಾರೆ ಎಂಬುದು ತಿಳಿಯಬೇಕು. ಆ ವ್ಯಕ್ತಿಯಿಂದ‌ ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಮುಚ್ಚಿಡಲಾಗಿದೆಯೇ? ಎಂಬ ಅನುಮಾನ ವ್ಯಕ್ತಪಡಿಸಿದರು.

ಇಂಥ ವಿಚಾರಗಳಲ್ಲಿ ನಾನು ಹೆಚ್ಚಿಗೆ ಚರ್ಚೆ ಮಾಡುವುದಕ್ಕೆ ಹೋಗಲ್ಲ. ಆದರೆ ಕೆಲ ವ್ಯಕ್ತಿಗಳು ಇಂಥ ಸಮಯವನ್ನು ದುರ್ಬಳಕೆ ಮಾಡಿಕೊಳ್ಳುವಲ್ಲಿ ಎಕ್ಸ್‌ಪರ್ಟ್ ಆಗಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಇದೇ ವೇಳೆ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಅಹಿಂದ ಸಮಾವೇಶ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕೈ ನಾಯಕರು ಕುರ್ಚಿ ಉಳಿಸಿಕೊಳ್ಳಲು ಅಹಿಂದ ಸಮಾವೇಶ ನಡೆಸ್ತಿದ್ದಾರೆ. ಅಹಿಂದ ಸಮುದಾಯದ ಜನ ಏನು ಹೇಳ್ತಿದ್ದಾರೆ. ನಮ್ಮ ಭಿಕ್ಷೆಯಿಂದ ಕಾಂಗ್ರೆಸ್‌ಗೆ ಅಧಿಕಾರ ಎನ್ನುತ್ತಿದ್ದಾರೆ. ಈ ಪರಿಸ್ಥಿಯಲ್ಲಿ ಸಮಾವೇಶ ಮಾಡ್ತಿದ್ದಾರೆ. ಸಮಾವೇಶಕ್ಕೆ ದುಡ್ಡು ಖರ್ಚು ಮಾಡಿ ಜನ ಸೇರಿಸುತ್ತಾರೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *