ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ದಾವಣಗೆರೆ ಉಪಚುನಾವಣೆಯಿಂದ ಆರಭವಾದ ತಿಕ್ಕಾಟ ಪಕ್ಷ ಇಬ್ಭಾಗದವರೆಗೂ ಬಂದು ನಿಂತಿದೆ. ಹೌದು… ರಾಜ್ಯ ರಾಜಕಾರಣದಲ್ಲಿ ಈಗ ಹೊಸದೊಂದು ಸಂಚಲನ ಸೃಷ್ಟಿಯಾಗಿದೆ. ಸತತವಾಗಿ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತಿದ್ದ ಅಹಿಂದ ವರ್ಗ ಈಗ ಬಂಡಾಯದ ಬಾವುಟ ಹಾರಿಸಿದೆ. ಒಂದೆಡೆ ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬೆಂಬಲಿಗರ ನಡುವೆ ಶೀತಲ ಸಮರ ನಡೆಯುತ್ತಿದ್ದರೆ, ಇನ್ನೊಂದೆಡೆ ಸರ್ಕಾರಕ್ಕೆ ಬೆಂಬಲ ನೀಡಿದ ಅಹಿಂದ ಸಂಘಟನೆಯೇ ಈಗ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದೆ.
ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರಿಗೆ ಅಹಿಂದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶಿವಣ್ಣ ಅವರು ಬಹಿರಂಗವಾಗಿಯೇ ವಾರ್ನಿಂಗ್ ನೀಡಿದ್ದು, ಹೊಸ ಪಕ್ಷ ಕಟ್ಟುವ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಹಿಂದ ವರ್ಗದ ಹಿತಾಸಕ್ತಿಗಳನ್ನು ಬಲಿ ಕೊಡುತ್ತಿದೆ ಎಂದು ಆರೋಪಿಸಿರುವ ಶಿವಣ್ಣ, ನಮಗೆ ನ್ಯಾಯ ಸಿಗದಿದ್ದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಗುಡುಗಿದ್ದಾರೆ. ನಮ್ಮನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸಲು 2028ರ ವಿಧಾನಸಭಾ ಚುನಾವಣೆಯ ವೇಳೆಗೆ ರಾಷ್ಟ್ರೀಯ ಅಹಿಂದ ಪಕ್ಷವನ್ನು ಸ್ಥಾಪಿಸಿ ರಾಜ್ಯಾದ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇದು ಕೇವಲ ಎಚ್ಚರಿಕೆಯಲ್ಲ, ಕಾಂಗ್ರೆಸ್ ಪಾಳಯದಲ್ಲಿ ನಡುಕ ಹುಟ್ಟಿಸುವ ಹೊಸ ರಾಜಕೀಯ ರಣತಂತ್ರವಾಗಿದೆ.
ಕಾಂಗ್ರೆಸ್ ನಾಯಕತ್ವದ ವಿರುದ್ಧ ಕೆಂಡಾಮಂಡಲವಾಗಿರುವ ಶಿವಣ್ಣ, ಮುಸ್ಲಿಂ ಸಮುದಾಯ ಮತ್ತು ದಲಿತ ವರ್ಗಕ್ಕೆ ಸರ್ಕಾರದಲ್ಲಿ ಮತ್ತು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ದೂರಿದ್ದಾರೆ. ದಾವಣಗೆರೆಯಲ್ಲಿ ಕೇವಲ ಒಂದು ಪ್ರಭಾವಿ ಕುಟುಂಬಕ್ಕಾಗಿ ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್ ತಪ್ಪಿಸಲಾಗಿದೆ. ನಾವು ಕೇವಲ ನಿಮಗೆ ಮತ ಹಾಕುವ ಯಂತ್ರಗಳಾ ಅಥವಾ ನಿಮ್ಮ ಮುಂದೆ ಭಿಕ್ಷೆ ಬೇಡಬೇಕಾ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಅವರ ಅಹಿಂದ ಮತಬ್ಯಾಂಕ್ ಈಗ ಅವರ ಕೈತಪ್ಪುವ ಆತಂಕ ಎದುರಾಗಿದೆ
ರಾಜ್ಯ ರಾಜಕಾರಣದಲ್ಲಿ ದಲಿತ ಸಿಎಂ ಬಾಂಬ್..!
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಜೋರಾಗಿ ನಡೆಯುತ್ತಿರುವ ಬೆನ್ನಲ್ಲೇ, ಶಿವಣ್ಣ ಅವರು ದಲಿತ ಸಿಎಂ ಬಾಂಬ್ ಸಿಡಿಸಿದ್ದಾರೆ. ದಲಿತ ಸಮುದಾಯದ ಹಿರಿಯ ನಾಯಕರಾದ ಜಿ ಪರಮೇಶ್ವರ್ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ದಲಿತರ ಮತಗಳನ್ನು ಪಡೆದು ಅಧಿಕಾರ ಅನುಭವಿಸುತ್ತಿರುವ ಕಾಂಗ್ರೆಸ್, ಅವರಿಗೆ ಅಧಿಕಾರ ನೀಡುವಲ್ಲಿ ವಿಳಂಬ ಮಾಡುತ್ತಿರುವುದನ್ನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿರುವ ಶಿವಣ್ಣ, ಜನರ ತೆರಿಗೆ ಹಣದಲ್ಲಿ ನೀವು ಎಸಿ ರೂಂಗಳಲ್ಲಿ ಮಜಾ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ಮತ್ತು ಬೆಲೆ ಏರಿಕೆ ತಾಂಡವವಾಡುತ್ತಿದೆ, ಆದರೆ ಜನಪ್ರತಿನಿಧಿಗಳು ಕೇವಲ ತಮ್ಮ ಅಧಿಕಾರ ಉಳಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ನಿಮ್ಮ ಈ ಆಡಳಿತ ವೈಖರಿ ಮುಂದುವರಿದರೆ 2028ರಲ್ಲಿ ನಿಮ್ಮನ್ನು ಜೈಲಿಗೆ ಕಳುಹಿಸುವುದು ಖಚಿತ ಎಂದು ಅವರು ಗುಡುಗಿದ್ದಾರೆ.