ಶಾಸಕ ಹೆಚ್.ಸಿ.ಬಾಲಕೃಷ್ಣ ಕಾರಿಗೆ ರೈತರಿಂದ ಮುತ್ತಿಗೆ

ರಾಮನಗರ : ಬಿಡದಿ ಹೋಬಳಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (GBIT) ಯೋಜನೆಗೆ ಭೂ ಸ್ವಾಧೀನ ವಿರೋಧಿಸುತ್ತಿರುವ ಅರಳಾಳುಸಂದ್ರ ಗ್ರಾಮಸ್ಥರು, ಗುರುವಾರ ಗ್ರಾಮಕ್ಕೆ ಬಂದಿದ್ದ ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೆ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.

ತಮ್ಮ ಪರಿಚಯಸ್ಥರ ಗೃಹ ಪ್ರವೇಶದಲ್ಲಿ ಪಾಲ್ಗೊಳ್ಳಲು ಬಾಲಕೃಷ್ಣ ಅವರು ಬಂದಿರುವ ವಿಷಯ ತಿಳಿಯುತ್ತಿದ್ದಂತೆ, ಗ್ರಾಮಸ್ಥರು ಮನೆಯತ್ತ ಜಮಾಯಿಸಿದರು. ಕಾರ್ಯಕ್ರಮ ಮುಗಿಸಿ ಹೊರಡಲು ಮುಂದಾದ ಶಾಸಕರ ಕಾರು ಅಡ್ಡಗಟ್ಟಿದರು. ಟೌನ್‌ಶಿಪ್‌ ಯೋಜನೆಗೆ ನಮ್ಮ ವಿರೋಧ ಲೆಕ್ಕಿಸದೆ ಭೂ ಸ್ವಾಧೀನ ಮಾಡಿಕೊಂಡು ಯೋಜನೆ ಅನುಷ್ಠಾನ ಮಾಡಲು ಮುಂದಾಗಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಜನೆ ಕುರಿತು ಇದುವರೆಗೆ ರೈತರ ಜೊತೆ ಸಭೆ ನಡೆಸದೆ ಬೇಜವಾಬ್ದಾರಿ ಪ್ರದರ್ಶಿಸಿದ್ದೀರಿ. ಹೀಗಿರುವಾಗ ನಮ್ಮ ಗ್ರಾಮಕ್ಕೆ ಯಾಕೆ ಬಂದಿದ್ದಿರಿ ಎಂದು ತರಾಟೆಗೆ ತೆಗೆದುಕೊಂಡು‌ ಧಿಕ್ಕಾರ ಕೂಗಿದರು. ಆಗ ಬಾಲಕೃಷ್ಣ ಮತ್ತು ಬೆಂಬಲಿಗರು ಗ್ರಾಮಸ್ಥರನ್ನು ಸಮಾಧಾನಪಡಿಸಲು ಮುಂದಾದಾಗ, ಪರಸ್ಪರ ಮಾತಿನ ಚಕಮಕಿ ನಡೆಯಿತು.

ಮಹಿಳೆಯರು ಸೇರಿದಂತೆ ಎಲ್ಲಾ ಹೋರಾಟಗಾರರೂ ಶಾಸಕರು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಮಾತನಾಡತೊಡಗಿದರು. ತಮ್ಮ ಮತ್ತು ಬೆಂಬಲಿಗರ ಮಾತಿಗೆ ಗ್ರಾಮಸ್ಥರು ಸಮಾಧಾನವಾಗದಿದ್ದನ್ನು ಅರಿತ ಬಾಲಕೃಷ್ಣ ಅವರು ಕಾರು ಏರಿ ಹೊರಟರು.

Leave a Reply

Your email address will not be published. Required fields are marked *