ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ: ರಾಷ್ಟ್ರಪತಿ, ಪ್ರಧಾನಿಗೆ ಶಾಸಕ ರಾಜು ಕಾಗೆ ಪತ್ರ

ಬೆಳಗಾವಿ : ರಾಜ್ಯದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಉತ್ತರ ಕರ್ನಾಟಕ ಭಾಗದ 15 ಜಿಲ್ಲೆಗಳನ್ನು ಒಳಗೊಂಡ ಪ್ರತ್ಯೇಕ ರಾಜ್ಯ ರಚಿಸಬೇಕು ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲರು ಹಾಗೂ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

ಉತ್ತರ ಕರ್ನಾಟಕ ಭಾಗವು ಪ್ರತಿಯೊಂದು ವಲಯದಲ್ಲೂ ನಿರಂತರವಾಗಿ ಅನ್ಯಾಯ, ತಾರತಮ್ಯ ಮತ್ತು ನಿರ್ಲಕ್ಷ್ಯವನ್ನು ಎದುರಿಸುತ್ತಿದೆ. ಎಂದು ತಾವು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎನ್ನುವ ಬೇಡಿಕೆಯನ್ನು ಮತ್ತೆ ರಾಜು ಕಾಗೆಯವರು ಮುನ್ನೆಲೆಗೆ ತಂದಿದ್ದಾರೆ. ಆ ಬೆನ್ನೆಲ್ಲೇ ರೊಚ್ಚಿಗೆದ್ದ ಉತ್ತರ ಕರ್ನಾಟಕ ಹೋರಾಟ ಸಮಿತಿ, ಉತ್ತರ ಕರ್ನಾಟಕ ವಿಕಾಸ ವೇದಿಕೆಯು ಚಳಿಗಾಲದ ಅಧಿವೇಶನದಲ್ಲಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಸುವರ್ಣ ವಿಧಾನಸೌಧದ ಮೇಲೆ ಪ್ರತ್ಯೇಕ ರಾಜ್ಯದ ಧ್ವಜಾರೋಹಣದ ಎಚ್ಚರಿಕೆಯನ್ನು ಕೊಟ್ಟಿದೆ.

ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ಹಾವೇರಿ, ವಿಜಯನಗರ, ಬಳ್ಳಾರಿ ಮತ್ತು ದಾವಣಗೆರೆಯನ್ನು ಒಳಗೊಂಡ 15 ಜಿಲ್ಲೆಗಳನ್ನು ಉತ್ತರ ಕರ್ನಾಟಕ‌ ರಾಜ್ಯವನ್ನಾಗಿಸಲು ರಾಷ್ಟ್ರಪತಿ, ಪ್ರಧಾನಿ, ಸಿಎಂಗೆ ಶಾಸಕ ರಾಜು ಕಾಗೆ ಅವರು ನವೆಂಬರ್ 4 ರಂದು ಪತ್ರ ಬರೆದಿದ್ದಾರೆ.

ರಾಜು ಕಾಗೆ ಬರೆದಿರುವ ಪತ್ರದಲ್ಲೇನಿದೆ..!?
ಕರ್ನಾಟಕ ಏಕೀಕರಣವಾದಾಗಿನಿಂದ ಉತ್ತರ ಕರ್ನಾಟಕದ ಜಿಲ್ಲೆಗಳು ನಿರಂತರವಾಗಿ ಅನ್ಯಾಯ, ತಾರತಮ್ಯ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮಲತಾಯಿ ಧೋರಣೆ ತೋರಲಾಗುತ್ತಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ, ಮತ್ತೊಂದು ಹೆಮ್ಮೆಯ ಕನ್ನಡ ಮಾತನಾಡುವ ರಾಜ್ಯಕ್ಕೆ ಜನ್ಮ ನೀಡುವಂತಾಗುತ್ತದೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯವೂ ಹೌದು. ಉತ್ತರ ಕರ್ನಾಟಕವು ಎಲ್ಲ ರೀತಿಯ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಪ್ರದೇಶವಾಗಿದೆ. ಕನ್ನಡ ಭಾಷೆಯ ಉಳಿವಿಗೆ ಹಾಗೂ ಕರ್ನಾಟಕದ ಏಕೀಕರಣಕ್ಕೆ ಮಹತ್ವದ ಕೊಡುಗೆ ನೀಡಿದೆ ಎಂದು ತಮ್ಮ ಪತ್ರದಲ್ಲಿ ರಾಜುಕಾಗೆ ಅವರು ಉಲ್ಲೇಖಿಸಿದ್ದಾರೆ.

ಅವರು, ಈಗಾಗಲೇ ಒಂದು ಕೋಟಿಗೂ ಹೆಚ್ಚು ಜನರು ಈ ಬೇಡಿಕೆಗೆ ಸಹಿ ಹಾಕುವ ಮೂಲಕ ಲಿಖಿತ ಒಪ್ಪಿಗೆ ನೀಡಿದ್ದಾರೆ . ಈ ಪ್ರದೇಶದ ಎಲ್ಲಾ ವರ್ಗದ ಜನರು ತಮ್ಮ ಒಟ್ಟಾರೆ ಮತ್ತು ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯವನ್ನು ಕೇಳುತ್ತಿದ್ದಾರೆ. ಆದ್ದರಿಂದ, ದಯವಿಟ್ಟು ನಮ್ಮ ಮನವಿಯನ್ನು ಪರಿಗಣಿಸಿ ಮತ್ತು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ವಿನಂತಿಸುತ್ತೇನೆ ಎಂದು ಶಾಸಕರು ರಾಷ್ಟ್ರಪತಿ, ಪ್ರಧಾನಿ ಹಾಗೂ ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *