‘ನಂಗೆ ಸಚಿವಸ್ಥಾನ ಸಿಗುತ್ತೋ ಬಿಡುತ್ತೋ ಆದ್ರೆ ಸಿದ್ದರಾಮಯ್ಯನೇ 5 ವರ್ಷ ಸಿಎಂ ಆಗಿರ್ಬೇಕು’

ಕೊಪ್ಪಳ : ನನಗೆ ಸಚಿವ ಸ್ಥಾನ ಸಿಗುತ್ತೋ ಇಲ್ವೊ ಗೊತ್ತಿಲ್ಲ. ಆದ್ರೆ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಿದ್ದರಾಮಯ್ಯ ಅವರೇ ಪೂರ್ಣ ಐದು ವರ್ಷ ಮುಖ್ಯಮಂತ್ರಿ ಆಗಿರಬೇಕು. ನನ್ನ ಪ್ರಕಾರ ಅವರೇ ಸಿಎಂ ಆಗಿರುತ್ತಾರೆ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಬಣವಿಲ್ಲ, ನಾನಂತೂ ಸಿದ್ದರಾಮಯ್ಯ ಅವರ ಪರವಾಗಿ ಇರುತ್ತೇನೆ. ಅವರು ಒಳ್ಳೆಯ ಆಡಳಿತ ಕೊಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಮಾಡುತ್ತೇವೆ ಎಂದು ಹೈಕಮಾಂಡ್‌ ಹೇಳಿಲ್ಲ. ಹೀಗಾಗಿ ಬದಲಾವಣೆಯ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎಂದರು.

ಇನ್ನ ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ಯಾರನ್ನಾದರೂ ಬದಲಿಸಬೇಕಾದರೆ ವರಿಷ್ಠರು ಶಾಸಕರ ಅಭಿಪ್ರಾಯ ಕೇಳಬೇಕಾಗುತ್ತದೆ. ಒಂದು ಸಲ ಆಯ್ಕೆ ಮಾಡಿದರೆ ಐದು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ. ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುತ್ತಿದ್ದು ಬದಲಾವಣೆ ಪ್ರಶ್ನೆಯೇ ಇಲ್ಲ ಎಂದರು.

ಸದ್ಯ ಕಪಿಲ್‌ ಸಿಬಲ್‌ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ನವದೆಹಲಿಗೆ ತೆರಳುತ್ತಿದ್ದು ನನಗೂ ಬರಲು ಹೇಳಿದ್ದಾರೆ. ಯಾರನ್ನು ಸಚಿವರನ್ನಾಗಿ ಮಾಡಬೇಕು ಎನ್ನುವುದನ್ನು ಸಿಎಂ ಹಾಗೂ ವರಿಷ್ಠರು ನಿರ್ಧರಿಸುತ್ತಾರೆ. ಸಚಿವ ಸ್ಥಾನ ಕೊಡಿ ಎಂದು ಕೇಳಿದ್ದೇನೆ ಎಂದರು.

ಬಳಿಕ ದೆಹಲಿಯಲ್ಲಿ ನಡೆದ ಸ್ಫೋಟದ ಬಗ್ಗೆ ಪ್ರತಿಕ್ರಿಯಿಸಿ, ಕೇಂದ್ರದ ಅಧೀನದಲ್ಲಿರುವ ಗುಪ್ತಚರ ಇಲಾಖೆ ವೈಫಲ್ಯದಿಂದ ದುರ್ಘಟನೆ ನಡೆದಿದ್ದು, ಸಣ್ಣ ವಿಷಯಗಳಿಗೂ ರಾಜೀನಾಮೆ ಕೊಡಿ ಎಂದು ನಮ್ಮನ್ನು ಕೇಳುವ ರಾಜ್ಯದ ಬಿಜೆಪಿ ನಾಯಕರು ಈಗ ಅಮಿತ್‌ ಶಾ ರಾಜೀನಾಮೆಯನ್ನು ಯಾಕೆ ಕೇಳಬಾರದು ಎಂದು ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *