ಸಿಎಂ ರೆಸ್‌ಗೆ ಹೊಸ ಡಾರ್ಕ್ ಹಾರ್ಸ್ ಎಂಟ್ರಿ..! ಬೊಮ್ಮಾಯಿ ಸ್ಫೋಟಕ‌ ಹೇಳಿಕೆ

ಹಾವೇರಿ: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಸಿಎಂ ಬದಲಾವಣೆ ಕದನ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇಂದು ಸಿಎಂ-ಡಿಸಿಎಂ ಡಿನ್ನರ್ ಮೀಟಿಂಗ್ ಮುಗಿಸಿ ಡೆಲ್ಲಿಗೆ ಹಾರಲಿದ್ದಾರೆ. ಈ ನಡುವೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಫೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ. ಸದ್ಯದಲ್ಲೇ ರಾಜ್ಯ ರಾಜಕೀಯದಲ್ಲಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ. ಮುನ್ನೆಲೆಯಲ್ಲಿರುವ ನಾಯಕರನ್ನು ಬಿಟ್ಟು ಹೊಸ ಮುಖವೊಂದು ಅಥವಾ ಡಾರ್ಕ್ ಹಾರ್ಸ್ ರೇಸ್‌ಗೆ ಬರುವ ಸಾಧ್ಯತೆಯಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಹಗ್ಗಜಗ್ಗಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರವನ್ನು ಬಗೆಹರಿಸಲು ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣ ವಿಫಲವಾಗಿದೆ. ದೆಹಲಿ ನಾಯಕರು ಈಗಾಗಲೇ ಎರಡು-ಮೂರು ಸಂಧಾನ ಸೂತ್ರಗಳನ್ನು ಮುಂದಿಟ್ಟರೂ, ಉಭಯ ನಾಯಕರು ಅದಕ್ಕೆ ಒಪ್ಪಿಗೆ ಸೂಚಿಸುತ್ತಿಲ್ಲ. ಇದು ಪಕ್ಷದ ವರಿಷ್ಠರನ್ನು ಅಸಹಾಯಕ ಸ್ಥಿತಿಗೆ ತಳ್ಳಿದೆ. ಇಬ್ಬರೂ ನಾಯಕರು ಇದನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿರುವುದರಿಂದ ರಾಜ್ಯದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ಬೊಮ್ಮಾಯಿ ಟೀಕಿಸಿದರು.

ಸದ್ಯ ಫೋಟೋದಲ್ಲಿ ಕಾಣುತ್ತಿರುವ ಕುದುರೆಗಳು ಓಡುವುದಿಲ್ಲ. ಬದಲಿಗೆ ಈಗ ಕಣ್ಣಿಗೆ ಕಾಣದ ಕುದುರೆಯೊಂದು ರೇಸ್ ಗೆಲ್ಲುವ ಸಾಧ್ಯತೆಯಿದೆ. ಇಬ್ಬರೂ ನಾಯಕರನ್ನು ಪಕ್ಕಕ್ಕಿಟ್ಟು ಬೇರೆಯದೇ ಸೂತ್ರವನ್ನು ತಯಾರು ಮಾಡುವ ಮಾಹಿತಿ ಲಭ್ಯವಾಗಿದೆ. ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಷಣಕ್ಕೂ ಬದಲಾವಣೆಗಳು ಆಗುತ್ತಿದ್ದು, ಅನಿರೀಕ್ಷಿತವಾಗಿ ಡಾರ್ಕ್ ಹಾರ್ಸ್ ಎಂಟ್ರಿಯಾಗಲಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಅಚ್ಚರಿಯ ಹೇಳಿಕೆ ನೀಡಿದರು.

ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿವೇಶನ ಆರಂಭವಾಗಲು ಡಿಸೆಂಬರ್ 8 ರವರೆಗೂ ಸಮಯವಿದೆ. ಅಂದಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ, ಅಗತ್ಯ ಬಿದ್ದರೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಸಂಗ ಎದುರಾಗಬಹುದು ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *