ನವದೆಹಲಿ : ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಜೋರಾಗೇ ನಡೆಯುತ್ತಿದೆ. ಡಿ.ಕೆ ಶಿವಕುಮಾರ್ (DK Shivakumar) ಸಿಎಂ ಆಗ್ತಾರಾ? ಸಂಪುಟ ಪುನಾರಚನೆಯ ದಾಳ ಉರುಳಿಸಿ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ತಾರಾ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಹರಿದಾಡ್ತಿದೆ. ಆದ್ರೆ, ಹೈಕಮಾಂಡ್ ಪ್ಲಾನ್ ಬೇರೆ ರೀತಿಯೇ ಇದೆ!
ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ ಅವರು ಮತ್ತೆ ದೆಹಲಿ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ವಿದೇಶಿ ಪ್ರವಾಸಕ್ಕೆ ತೆರಳಲಿದ್ದಾರೆ! ಎನ್ನಲಾಗ್ತಿದೆ.
ನವೆಂಬರ್ 14ಕ್ಕೆ ಬಿಹಾರ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ನಡುವೆ ಒಂದು ವಾರ ಫಿನ್ಲ್ಯಾಂಡ್ಗೆ ವಿದೇಶ ಪ್ರವಾಸಕ್ಕೆಂದು ತೆರಳಲು ರಾಹುಲ್ ಸಿದ್ಧತೆ ನಡೆಸುತ್ತಿದ್ದಾರೆ? ಹೀಗಾಗಿ ಯಾರ ಭೇಟಿಗೂ ಅವಕಾಶ ನೀಡುವ ಸಾಧ್ಯತೆ ಇಲ್ಲ? ಎಂಬುದು ಕಾಂಗ್ರೆಸ್ ಮೂಲಗಳ ಮಾಹಿತಿ.
ರಾಹುಲ್ ಗಾಂಧಿ ವಿದೇಶ ಪ್ರವಾಸದ ಹಿನ್ನೆಲೆಯಲ್ಲಿ ದೆಹಲಿಗೆ ಸಿಎಂ, ಡಿಸಿಎಂ ಹಾಗೂ ಸಚಿವರ ಪ್ರವಾಸ ದೊಡ್ಡ ಮಟ್ಟದ ಇಂಪ್ಯಾಕ್ಟ್ ಮಾಡುವ ಸಾಧ್ಯತೆ ಕಡಿಮೆ. ಸಿದ್ದರಾಮಯ್ಯ ನವೆಂಬರ್ 15 ರಂದು ದೆಹಲಿಗೆ ತೆರಳಲಿದ್ದಾರೆ? ಆದರೆ ದೆಹಲಿಯಲ್ಲಿ ರಾಹುಲ್ ಭೇಟಿ ಆಗದೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಬಿಹಾರ ವಿಧಾನಸಭೆ ಚುನಾವಣೆ ಬೆನ್ನಲ್ಲೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ವಿದೇಶಕ್ಕೆ ತೆರಳುತ್ತಾರಂತೆ. ಆದ್ದರಿಂದ ನವೆಂಬರ್ 15 ರಿಂದ ನವೆಂಬರ್ 20ರ ನಡುವೆ ನಡೆಯಲಿದೆ ಎನ್ನಲಾಗಿದ್ದ ನವೆಂಬರ್ ಕ್ರಾಂತಿಗೆ ಸಣ್ಣ ಬ್ರೇಕ್ ಬಿದ್ದಂತೆ ಕಾಣುತ್ತಿದೆ.
ಸಚಿವ ಸಂಪುಟ ಪುನರ್‌ರಚನೆ ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಲು ನವೆಂಬರ್ 15ರ ಬಳಿಕ ದೆಹಲಿಗೆ ತೆರಳುವುದಾಗಿ ಸಿದ್ದರಾಮಯ್ಯ ಹೇಳಿದ್ರು. ಅದಕ್ಕೂ ಮೊದಲು ಡಿ.ಕೆ ಶಿವಕುಮಾರ್ ದೆಹಲಿ ನಾಯಕರನ್ನು ಭೇಟಿ ಮಾಡಲಿದ್ದಾರೆ. ಸಂಪುಟ ಪುನರ್‌ರಚನೆ, ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತಿತರ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿತ್ತು!
ನವೆಂಬರ್ ಬೀಳುತ್ತಾ ಕ್ರಾಂತಿಗೆ ಬ್ರೇಕ್?
ನವೆಂಬರ್ 14 ರಂದು ಬಿಹಾರ ಚುನಾವಣೆ ಫಲಿತಾಂಶ ಬಳಿಕ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಲಿದ್ದಾರೆ. ಹೀಗಾಗಿ ರಾಜ್ಯದ ನಾಯಕರ ಭೇಟಿಗೆ ಸಿಗುವುದಿಲ್ಲ. ರಾಹುಲ್‌ಗಾಂಧಿ ದೇಶಕ್ಕೆ ವಾಪಸ್ ಬರುವವರೆಗೂ ರಾಜ್ಯ ಕಾಂಗ್ರೆಸ್‌ನ ಬೆಳವಣಿಗೆಗಳು ಮುಂದೂಡಲ್ಪಡುತ್ತವಾ ಅಥವಾ ಅವರ ಅನುಪಸ್ಥಿತಿಯಲ್ಲಿ ಸಲಹೆ-ಸೂಚನೆ ಪಡೆದು ನಿರ್ಧಾರ ಮಾಡ್ತಾರಾ ಎಂಬ ಪ್ರಶ್ನೆಗಳು ಉದ್ಭವಿಸಿವೆ?
ರಾಹುಲ್‌ಗಾಂಧಿ ವಿದೇಶ ಪ್ರವಾಸಕ್ಕೆ ಹೋಗುವ ಮೊದಲೇ ಸೂಚನೆ ನೀಡಿ, ಸಂಪುಟ ಪುನರ್ ರಚನೆ ಸೇರಿ ವಿವಿಧ ವಿಷಯಗಳ ಬಗ್ಗೆ ಎಐಸಿಸಿ ಅಧ್ಯಕ್ಷರು, ರಾಜ್ಯ ನಾಯಕರಿಗೆ ಸ್ಪಷ್ಟನೆ ನೀಡಲಿದ್ದಾರೆಯೇ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.