ಬ್ರೇಕ್ ಆಗಿರುವ ಸಂಬಂಧಗಳು ಕೇವಲ ಒಂದು ಬ್ರೇಕ್‌ಫಾಸ್ಟ್‌ನಲ್ಲಿ ಸರಿ ಹೋಗುತ್ತಾ‌..?

ಚಿತ್ರದುರ್ಗ : ರಾಜ್ಯ ಕಾಂಗ್ರೆಸ್‌ ಬುಗಿಲೆದ್ದಿದ್ದ ಸಿಎಂ ಕುರ್ಚಿ ಕದನ ಸದ್ಯಕ್ಕೇನೋ ಬ್ರೇಕ್ ಬಿದ್ದಿದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕರು ಬ್ರೇಕ್ ಫಾಸ್ಟ್ ನಲ್ಲಿ ಎಲ್ಲವೂ ಮುಗಿದು ಹೋಯಿತು ಎನ್ನುತ್ತಿದ್ದಾರೆ. ಆದರೆ ಬ್ರೇಕ್‌ ಆಗಿರುವ ಸಂಬಂಧಗಳು ಒಂದು ಬ್ರೇಕ್ ಫಾಸ್ಟ್‌ನಿಂದ ಸರಿಯಾಗುತ್ತದೆಯೇ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿ, ಒಂದು ಕುಟುಂಬವೇ ಕೈ ಹೈಕಮಾಂಡ್? ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ವೀಕ್‌ ಆಗಿದೆ. ಇಷ್ಟು ದಿನ ಎಐಸಿಸಿ ಅಧ್ಯಕ್ಷರೇ ಹೈಕಮಾಂಡ್ ಅಂದುಕೊಳ್ಳಲಾಗಿತ್ತು. ಆದರೆ ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ರಾಜ್ಯದ ಸ್ಥಿತಿಗತಿಯನ್ನು ಹೈಕಮಾಂಡ್‌ಗೆ ಹೇಳುತ್ತೇನೆ ಎನ್ನುತ್ತಿದ್ದಾರೆ.

ಹಾಗಾದರೆ ‌ಯಾರು ಹೈಕಮಾಂಡ್, ಒಂದು ಕುಟುಂಬವಾ? ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಸಾಧ್ಯವೇ ಇಲ್ಲ. ಏಕೆಂದರೆ ಅಲ್ಲಿರುವ ದಲಿತ ನಾಯಕರಲ್ಲಿ ಒಗ್ಗಟ್ಟಿಲ್ಲ. ಕೇವಲ ನಾಲ್ಕೈದು ಕುಟುಂಬಗಳನ್ನು ತೋರಿಸಿಕೊಂಡು ಕಾಂಗ್ರೆಸ್‌ ಪಕ್ಷ ದಲಿತ ಪರ ಎಂದು ತೋರಿಸಲಾಗುತ್ತಿದೆ. ನಮಗೆ ಅನ್ಯಾಯವಾಗಿದೆ ಎಂದು ದಲಿತ ನಾಯಕರು ಹಕ್ಕು ಮಂಡನೆ ಮಾಡುವುದನ್ನೇ ಮರೆತಿದ್ದಾರೆ. ಸಿಎಂ, ಡಿಸಿಎಂ ಪರ ಅನೇಕ ನಾಯಕರು, ಮುಖಂಡರು ಧ್ವನಿ ಎತ್ತುತ್ತಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *