ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಅಧಿಕಾರ ಬದಲಾವಣೆ ವಿಚಾರ ಭಾರಿ ಸದ್ದು ಮಾಡುತ್ತಿರುವ ನಡುವೆಯೇ ಸಿಎಂ ಸಿದ್ದರಾಮಯ್ಯ ರಾಷ್ಟ್ರಮಟ್ಟದಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ!
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಸಚಿವ ಕೆ.ಎನ್.ರಾಜಣ್ಣ ನಿವಾಸದಲ್ಲಿ ಏರ್ಪಡಿಸಿದ್ದ ಡಿನ್ನರ್ ಮೀಟಿಂಗ್ ರದ್ದಾಯ್ತು. ಈ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ ಇದೇ 16ರಂದು ದೆಹಲಿಯಲ್ಲಿ ಸಂಸದ ರಾಜಶೇಖರ ಹಿಟ್ನಾಳ್ ಮನೆಯಲ್ಲಿ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಲಿದ್ದಾರೆ. ಸಿಎಂ ಬಣದ ಸಚಿವರು, ಶಾಸಕರು ಮತ್ತು ಸಂಸದರು ಕೂಡ ಈ ವೇಳೆ ಉಪಸ್ಥಿತರಿರಲಿದ್ದು, ಡಿನ್ನರ್ ಪಾರ್ಟಿ ಬಗ್ಗೆ ಹಿಟ್ನಾಳ್ ಸೋದರರು ಈಗಾಗಲೇ ಖಚಿತಪಡಿಸಿದ್ದಾರೆ.
ಇದನ್ನೂ ಓದಿ : ‘ಸಿದ್ದರಾಮಯ್ಯರನ್ನ ಕೆಳಗಿಳಿಸಿದ್ರೆ ಕಾಂಗ್ರೆಸ್ ಕತೆ ಕ್ಲೋಸ್’: ವರ್ತೂರು ಪ್ರಕಾಶ್ ಎಚ್ಚರಿಕೆ
ದೆಹಲಿಯಲ್ಲಿ ಮನೆ ಸಿಕ್ಕಿರುವ ಕಾರಣಕ್ಕೆ ಮತ್ತು ಸಿಎಂ ಸಿದ್ದರಾಮಯ್ಯ ಮೂರು ದಿನ ದೆಹಲಿಯಲ್ಲಿ ಇರುತ್ತಾರೆ. ಹೀಗಾಗಿ ಸಿಎಂ ಹಾಗೂ ಅವರ ಜೊತೆಗೆ ಬಂದವರಿಗೆ ಔತಣಕೂಟಕ್ಕೆ ಕರೆಯುತ್ತೇನೆ ಎಂದು ಸಂಸದ ರಾಜಶೇಖರ ಹಿಟ್ನಾಳ್ ಕಾರಣ ನೀಡಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಂದರೂ ಅವರನ್ನು ಔತಣಕೂಟಕ್ಕೆ ಕರೆಯುತ್ತೇನೆ ಎಂದು ಹಿಟ್ನಾಳ್ ಹೇಳಿದ್ದು, ಡಿನ್ನರ್ ಪಾರ್ಟಿ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ಸಾಧ್ಯತೆ ಇದೆ ಎನ್ನಲಾಗಿದೆ. ನವೆಂಬರ್ 15ರಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದು, ಹೈಕಮಾಂಡ್ ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ.
ಹೈಕಮಾಂಡ್ಗೆ ಸಂದೇಶ ರವಾನಿಸಲು ಸಿದ್ದು ಮಾಸ್ಟರ್ ಪ್ಲ್ಯಾನ್?
ನವೆಂಬರ್ ಕ್ರಾಂತಿ ವಿಚಾರ ರಾಜ್ಯದಲ್ಲಿ ತೀವ್ರ ಚರ್ಚೆಯಲ್ಲಿದೆ. ಡಿಸಿಎಂ ಡಿಕೆಶಿ ಸಿಎಂ ಆಗಲಿದ್ದಾರೆ ಎಂಬ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಈ ನಡುವೆ ದೆಹಲಿಯಲ್ಲೇ ಈ ರೀತಿಯ ಔತಣ ಕೂಡದ ಆಯೋಜನೆ ಹತ್ತು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಡಿನ್ನರ್ ಪಾರ್ಟಿ ವೇಳೆ ರಾಜ್ಯ ರಾಜಕೀಯ ವಿಚಾರದ ಚರ್ಚೆಯೂ ಆಗುವ ಸಾಧ್ಯತೆ ಇದ್ದು, ಆ ಮೂಲಕ ಹೈಕಮಾಂಡ್ಗೆ ತಮ್ಮ ಶಕ್ತಿ ತೋರಿಸಲು ಸಿದ್ದರಾಮಯ್ಯ ಮುಂದಾಗ್ತಿದ್ದಾರಾ ಎಂಬ ಬಗ್ಗೆ ಅನುಮಾನ ರಾಜಕೀಯ ವಲಯದಿಂದ ವ್ಯಕ್ತವಾಗಿದೆ.
ಇನ್ನೊಂದು ಕಡೆ ದೆಹಲಿಯಲ್ಲಿ ಸಂಸದ ಹಿಟ್ನಾಳ್ ಔತಣಕೂಟ ಆಯೋಜನೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಡಿನ್ನರ್ ಪಾರ್ಟಿಗೆ ನನ್ನ ಅವರೇನು ಕರೆದಿಲ್ಲ, ಹಾಗಾಗಿ ನಾನು ಹೋಗಲ್ಲ. ಸಿಎಂ ದೆಹಲಿಗೆ ಹೋಗ್ತಿರೋದು ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಎಂದು ಸ್ಪಷ್ಟನೆ ನೀಡಿದ್ರು.