ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಕದನ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಹೈಕಮಾಂಡ್ ಅವಕಾಶ ಕೊಟ್ಟರೆ ಮುಂದಿನ ಎರಡು ವರ್ಷವೂ ನಾನೇ ಬಜೆಟ್ ಮಂಡಿಸುತ್ತೇನೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಯ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ನಿನ್ನೆ ಚಿತ್ತಾಪುರ ಕ್ಷೇತ್ರ್ರದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಅಲ್ಲಿಂದಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ವಿಮಾನದಲ್ಲಿ ದೆಹಲಿ ಪ್ರಯಾಣ ಬೆಳೆಸಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ದಿಲ್ಲಿಗೆ ತೆರಳುತ್ತಿರುವುದಾಗಿ ಡಿ.ಕೆ.ಶಿವಕುಮಾರ್ ಕಚೇರಿ ಮಾಹಿತಿ ನೀಡಿದೆ. ಆದ್ರೆ ಬಜೆಟ್ ಅಧಿವೇಶನದ ಸಂದರ್ಭದಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನರ್ ರಚನೆ ಸಂಬಂಧ ಚರ್ಚೆಗಳು ಬಿರುಸುಗೊಂಡಿವೆ. ಈ ಮಧ್ಯೆ ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಮುಸ್ಲೀಮರು, ಕ್ರಿಶ್ಚಿಯನ್ನರು ನನ್ನ ಸೋಲಿಸಲಿಲ್ಲ, ನಮ್ಮ ಹಿಂದೂಗಳೇ ಸೋಲಿಸಿದ್ದು : ಅನಂತ್ ಕುಮಾರ್ ಹೆಗ್ಡೆ ಗುಡುಗು
ಇನ್ನು ಡಿಕೆಶಿಗೆ ನಿಷ್ಠರಾಗಿರುವ ಕೆಲವು ಶಾಸಕರು, ವಿಧಾನಸಭೆಯ ಬಜೆಟ್ ಅಧಿವೇಶನದ ನಂತರ ತಮ್ಮ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಪಕ್ಷದ ಹೈಕಮಾಂಡ್ ಅನ್ನು ಒತ್ತಾಯಿಸಲು ದೆಹಲಿಗೆ ಪ್ರಯಾಣಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ. ಬಜೆಟ್ ಅಧಿವೇಶನವು ಮಾರ್ಚ್ 27 ರಂದು ಮುಕ್ತಾಯಗೊಳ್ಳಲಿದ್ದು ಬಳಿಕ ಹೈಕಮಾಂಡ್ ಮುಂದೆ ಬೇಡಿಕೆ ಇಡಲು ತಯಾರಿ ನಡೆಸಿದ್ದಾರೆ. ಈ ಮಧ್ಯೆ, ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷಗಳನ್ನು ಪೂರೈಸಿದ ನೆನಪಿಗಾಗಿ ಶಿವಕುಮಾರ್ ಮಾರ್ಚ್ 10 ರಂದು ಎಲ್ಲಾ ಸಚಿವರು, ಕಾಂಗ್ರೆಸ್ ಶಾಸಕರು ಮತ್ತು ಎಂಎಲ್‌ಸಿಗಳಿಗೆ ಭೋಜನ ಕೂಟವನ್ನು ಆಯೋಜಿಸಿದ್ದಾರೆ. ಆದ್ರೆ ಈ ಡಿನ್ನರ್ ಮೀಟಿಂಗ್ ಉದ್ದೇಶ ಬೇರೆಯದ್ದೇ ಇದೆ ಎಂದು ವಿಪಕ್ಷಗಳು ಚರ್ಚಿಸ್ತಿವೆ.