ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಸಿಎಂ ಬದಲಾವಣೆ ಚರ್ಚೆ ತಾರಕಕ್ಕೇರಿದೆ. ಈ ಬೆನ್ನಲ್ಲೇ ಇದೀಗ ಡಿಸಿಎಂ ಡಿ.ಕೆ.ಶಿವಕುಮಾರ್ ನೇರವಾಗಿ ಅಖಾಡಕ್ಕಿಳಿದಿದ್ದಾರೆ. ಇಂದು ಡಿ.ಕೆ.ಶಿವಕುಮಾರ್ ಮಾಡಿರುವ ಟ್ವೀಟ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಮಾಡಿದ ಟ್ವೀಟ್ ಅನ್ನು ಡಿ.ಕೆ.ಶಿವಕುಮಾರ್ ನಿರಾಕರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಧ್ಯ ಕುರ್ಚಿಗಾಗಿ ಸಂಘರ್ಷ ಗುಟ್ಟಾಗಿ ಉಳಿದಿಲ್ಲ. ಇವರ ಸಿಎಂ ಸ್ಥಾನದ ಪೈಪೋಟಿ ಹೈಕಮಾಂಡ್‌ಗೆ ತಲೆನೋವಾಗಿದೆ. ಅಧಿಕಾರ ಹಂಚಿಕೆ ವೇಳೆ 2.5 ವರ್ಷ ಸಿದ್ದರಾಮಯ್ಯ ಸಿಎಂ, ನಂತರದ 2.5 ವರ್ಷ ಡಿಕೆ ಶಿವಕುಮಾರ್ ಅವರು ಸಿಎಂ ಆಗಿರಲಿದ್ದಾರೆ ಎಂಬ ಮಾತು ಸರ್ಕಾರ ಅಧಿಕಾರಕ್ಕೆ ಬಂದಾಗಿ ಕೇಳಿ ಬಂದಿತ್ತು. ಹೀಗೆಂದು ಹೇಳಿಯೇ ಡಿಕೆ ಶಿವಕುಮಾರ್ ಅವರಿಗೆ ಡಿಸಿಎಂ ಹುದ್ದೆ ನೀಡಲಾಗಿತ್ತು ಎನ್ನಲಾಗಿದೆ.
ಆದರೆ ಈಗ ಸಿದ್ದರಾಮಯ್ಯ ಅವರು ತಾವೇ ಐದು ವರ್ಷ ಪೂರ್ಣಾವಧಿ ಸಿಎಂ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಅಂತಲೂ ತಿಳಿಸಿದ್ದರು. ಇದು ಡಿಸಿಎಂ ಡಿಕೆ ಶಿವಕುಮಾರ್ ಅವರ ನಿದ್ದೆಗಡಿಸಿದೆ. ಅವರ ಬೆಂಬಲಿಗರನ್ನು ದೆಹಲಿಗೆ ದೌಡಾಯಿಸುವಂತೆ ಮಾಡಿದೆ. ಇದೆಲ್ಲ ಬೆಳವಣಿಗೆ ಮಧ್ಯೆ ಡಿಕೆಶಿ ಅವರು ಹೈಕಮಾಂಡ್ ತಾನು ಕೊಟ್ಟಿದ್ದ ಭರವಸೆ, ಮಾತು ಉಳಿಸಿಕೊಳ್ಳಬೇಕೆಂದು ನೆನಪಿಸಿ ಪೋಸ್ಟ ಮಾಡಿದ್ದಾರೆ.
“ಪದ ಶಕ್ತಿಯೇ ವಿಶ್ವ ಶಕ್ತಿ’ ಡಿಕೆ ಶಿವಕುಮಾರ್ ಅವರು ಗುರುವಾರ ಬೆಳಗ್ಗೆ, “ಪದ ಶಕ್ತಿಯೇ ವಿಶ್ವ ಶಕ್ತಿ’, ಜಗತ್ತಿನ ಅತಿದೊಡ್ಡ ಶಕ್ತಿ ಎಂದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು. ನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ ಅಥವಾ ನಾನು ಸೇರಿದಂತೆ ಬೇರೆ ಯಾರೇ ಆಗಿರಲಿ, ಎಲ್ಲರೂ ಹೇಳಿದಂತೆ ನಡೆಯಬೇಕು. ಪದ ಶಕ್ತಿಯೇ ವಿಶ್ವ ಶಕ್ತಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರಿನ ಶಾಂಗ್ರೀಲಾ ಹೋಟೆಲ್ ಸಭೆ ಬಳಿಕ ದೆಹಲಿಯಲ್ಲಿ ನಡೆದ ಮಹತ್ವ ಚರ್ಚೆಗಳು, ಸಭೆಯಲ್ಲಿ ನೀಡಿದ್ದ ಭರವಸೆಯನ್ನು ವರಿಷ್ಠರಿಗೆ ನೆನಪಿಸುವ ಕೆಲಸ ಮಾಡಿದ್ದಾರೆ. ಈ ವಿಚಾರದಲ್ಲಿ ಈ ಸಲ ತಾವು ಮನವೊಲಿಕೆ ಬಗ್ಗುವುದಿಲ್ಲ ಎಂಬ ಸ್ಪಷ್ಟ ಸಂದೇಶ ಡಿಕೆ ಶಿವಕುಮಾರ್ ರವಾನಿಸಿದಂತೆ ಕಾಣುಸಿತ್ತಿದೆ.